ಹೆಬ್ರಿ, ಮಾ 6 (Daijiworld News/MSP): ಹೆಬ್ರಿ ಸರ್ಕಾರಿ ಪದವಿ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿ ಬಿಕಾಂ ವಿದ್ಯಾರ್ಥಿ ಹೆಗ್ಗುಂಜೆ ಗೋವೆಕೊಡ್ಲಿನ ಚರಣ್ (19) ಆತ್ಮಹತ್ಯೆಗೆ ಮಾಡಿಕೊಳ್ಳಲು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮಾನಸಿಕ ಹಿಂಸೆಯೇ ಕಾರಣ ಏಂದು ಆರೋಪಿಸಿ ಮೃತನ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ.
ಚರಣ್ ಹಾಜರಾತಿ ಕಡಿಮೆ ಇದ್ದುದರಿಂದ ವಾರ್ಷಿಕ ಪರೀಕ್ಷೆಗೆ ಕುಳಿತುಕೊಳ್ಳಲು ಪ್ರವೇಶಪತ್ರ ನೀಡಲಾಗುವುದಿಲ್ಲ ಹಾಗೂ ಹೆತ್ತವರನ್ನು ಕರೆದುಕೊಂಡು ಬರಬೇಕು ಎಂದು ಕಾಲೇಜಿನಿಂದ ಹೇಳಲಾಗಿತ್ತು. ಅದರಂತೆ ಮಂಗಳವಾರ ತಂದೆ ಚಂದ್ರ ಶೆಟ್ಟಿ ಅವರೌ ಚರಣ್ ಜತೆಗೆ ಕಾಲೇಜಿಗೆ ತೆರಳಿದ್ದು, ಚರ್ಚಿಸಿ ತಿಳಿಸುತ್ತೇವೆ ಎಂದು ಉಪನ್ಯಾಸಕರು ತಿಳಿಸಿದ್ದರು. ಚರಣ್ ಬುಧವಾರ ತರಗತಿಗೆ ಹೋದಾಗ ಪ್ರಾಂಶುಪಾಲರ ಅನುಮತಿ ಪಡೆದು ಬರುವಂತೆ ಕಳಿಸಿದ್ದಾರೆ. ಬಳಿಕ ಮನೆಗೆ ಬಂದು ಸಮೀಪದ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾಲೇಜ್ ಡೇ ದಿನ ಶಿಕ್ಷಕರಿಂದ ಮಾನಸಿಕ ಕಿರುಕುಳ ಆಗಿತ್ತು. ಪೋಷಕರ ಸಭೆಯಲ್ಲೂ ಶಿಕ್ಷಕರು ಅವಮಾನ ಮಾಡಿದ್ದರು, ತರಗತಿಯಿಂದ ಹೊರ ನೂಕಿದ್ದರು. ಜೊತೆಗೆ ಸರ್ಕಾರ ನೀಡಿದ್ದ ಲ್ಯಾಪ್ಟಾಪ್ ನೀಡದೆ ಅವಮಾನ ಮಾಡಿದ್ದರು. ಶಿಕ್ಷಕರಿಂದ ನಿರಂತರ ಮಾನಸಿಕ ಕಿರುಕುಳ ಆಗುತ್ತಿದೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಮೊದಲು ಗೆಳೆಯನಿಗೆ ವಿಡಿಯೋ ಕಾಲ್ ಮಾಡಿ ವಿಷಯ ತಿಳಿಸಿ ಮನೆಯ ಸಮೀಪದ ಹಾಡಿಯಲ್ಲಿರುವ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ.