ಮಂಗಳೂರು, ಮಾ 6 (Daijiworld News/MSP): ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ 100ಕ್ಕಿಂತ ಅಧಿಕ ಪ್ರಕರಣಗಳು ಬಾಕಿ ಇದ್ದಲ್ಲಿ, ವಿಶೇಷ ನ್ಯಾಯಾಲಯ ಆರಂಭಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ದಕ್ಷಿಣ ಕನ್ನಡ ಸಹಿತ ರಾಜ್ಯದ 17 ಜಿಲ್ಲೆಗಳಲ್ಲಿ ವಿಶೇಷ ಪೋಕ್ಸೋ ನ್ಯಾಯಾಲಯ ಗುರುವಾರ ಆರಂಭಗೊಂಡಿತು.
ಸಾಂದರ್ಭಿಕ ಚಿತ್ರ
ನಗರದ ದ.ಕ. ಜಿಲ್ಲಾ ನ್ಯಾಯಾಲಯದ ಆರನೇ ಮಹಡಿಯಲ್ಲಿ ಸಜ್ಜುಗೊಂಡಿರುವ ಪೋಕ್ಸೋ ವಿಶೇಷ ನ್ಯಾಯಾಲಯವನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಉದ್ಘಾಟಿಸಿದರು.
ಪ್ಲೇ ಸ್ಕೂಲ್ ಮಾದರಿ ವಾತಾವರಣ:
ಪೋಕ್ಸೋ ನ್ಯಾಯಾಲಯದ ವಾತಾವರಣ ಭಿನ್ನವಾಗಿದ್ದು, ಮಕ್ಕಳ ಆಟಿಕೆ, ಜಾರು ಬಂಡಿ, ಗೋಡೆಗಳಲ್ಲಿ ಮಕ್ಕಳನ್ನು ಸೆಳೆಯುವಂತಹ ಬಹುವರ್ಣದ ಚಿತ್ರಗಳಿರುವ ಕೊಠಡಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಇದು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳನ್ನು ವಿಚಾರಣೆಗೆ ಮೊದಲು ಮಾನಸಿಕವಾಗಿ ಸಿದ್ಧಪಡಿಸುವ ಪ್ಲೇ ಸ್ಕೂಲ್ ಮಾದರಿ ಕೊಠಡಿ. ಇಲ್ಲಿ ಪೊಲೀಸರು ತಮ್ಮ ಎಂದಿನ ಸಮವಸ್ತ್ರದಲ್ಲಿ ಇರುವುದಿಲ್ಲ. ಇದರ ಒಟ್ಟು ಉದ್ದೇಶ ಮಗು ಭಯ ಮುಕ್ತವಾಗಿ ತನ್ನ ಅನುಭವ- ಅಭಿಪ್ರಾಯ ಹಂಚಿಕೊಳ್ಳುವ ಪರಿಸ್ಥಿತಿ ನಿರ್ಮಿಸಲಾಗುತ್ತದೆ.
185 ಪ್ರಕರಣ ಬಾಕಿ
ದ.ಕ. ಜಿಲ್ಲೆಯಲ್ಲಿ 2017ರಿಂದ ಸುಮಾರು 185 ಪೋಕ್ಸೋ ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ. 2017 ಹಿಂದಿನ ಪ್ರಕರಣಗಳು ವಿಲೇವಾರಿಗೆ ಬಾಕಿ ಇಲ್ಲ ಎಂದು ಅಧಿಕೃತ ಮೂಲ ತಿಳಿಸಿದೆ.