ಮಂಗಳೂರು, ಮಾ 6 (Daijiworld News/MSP): ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ವಧಾಗಾರ ಅಭಿವೃದ್ದಿ ಪಡಿಸಲು ಯೋಚಿಸಿದ್ದೆ, ವಧಾಗಾರ ತ್ಯಾಜ್ಯದಿಂದ ನಗರದ ಇತರ ಪ್ರದೇಶಗಳಲ್ಲಿಯೂ ಅವ್ಯವಸ್ಥೆ ಉಂಟಾಗುತ್ತಿದ್ದು,ರೋಗಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ವಧಾಗಾರದ ಆಧುನಿಕರಣ ಮಾಡುವುದರ ಅಗತ್ಯವಿದೆ ಎಂದಾಗ ಕಳೆದ ವರ್ಷ ನನ್ನ ಬಿಜೆಪಿ ಸ್ನೇಹಿತರು ಕಟುವಾಗಿ ವಿರೋಧಿಸಿದ್ದರು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಆದರೆ ಅದೇ ಬಿಜೆಪಿ ಆಡಳಿತದ ಸರ್ಕಾರ ಗುರುವಾರ ಮಂಡಿಸಿದ ಬಜೆಟ್ ನಲ್ಲಿ ವಧಾಗಾರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಮಾಡಲಾಗುವುದು ಎಂದಿದ್ದಾರೆ. ಈಗ ಅದೇ ನನ್ನ ಬಿಜೆಪಿ ಸ್ನೇಹಿತರು ಎಲ್ಲಿದ್ದಾರೆ , ನಿಮ್ಮ ಉಗ್ರ ಹೋರಾಟ ಯಾವಾಗ ಮಾರ್ರೆ..? ಎಂದು ಅಪ್ಪಟ್ಟ ಮಂಗಳೂರು ಭಾಷೆಯ ಶೈಲಿಯಲ್ಲಿ ಬಿಜೆಪಿಗರನ್ನು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕುಟುಕಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಸಚಿವರು, ಮಂಗಳೂರಿನಲ್ಲಿ ಕಳೆದ ವರ್ಷ ನಾನು ವಧಾಗಾರವನ್ನ ಉನ್ನತಿಕರಣ ಮಾಡಿ ತ್ಯಾಜ್ಯವನ್ನ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಮುಂದಾದಾಗ ಇದೇ ಬಿಜೆಪಿ ಸ್ನೇಹಿತರು ಬೊಬ್ಬೆಯಿಟ್ಟು ಸರದಿ ಸಾಲಿನಲ್ಲಿ ಪ್ರತಿಭಟನೆ ಮಾಡಿದರು. "ಉಗ್ರ ಹೋರಾಟ"ದ ಎಚ್ಚರಿಕೆ ನೀಡಿದ್ದರು.
ಈಗ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ವಿವಿದೆಡೆ ವಧಾಗಾರದ ಉನ್ನತಿಕರಣಕ್ಕೆ ಮುಂದಾಗಿದೆ. ಈಗ ಯಾವೊಬ್ಬ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಪ್ರತಿಭಟನೆಯ ಸುದ್ದಿಯೇ ಇಲ್ಲ.ಎಲ್ಲರು ಮೌನ,ಎಲ್ಲೆಡೆಯೂ ಮೌನ.
ಉಗ್ರ ಹೋರಾಟ ಯಾವಾಗ ಮಾರ್ರೆ ? ಮೌನಂ ಸಮ್ಮತಿ ಲಕ್ಷಣಂ ಎಂದು ಬಿಜೆಪಿಗರ ಕಾಲೆಳೆದಿದ್ದಾರೆ.