Karavali
ಕುಂದಾಪುರ: ಕಲ್ಪವೃಕ್ಷದಿಂದ ’ಕಲ್ಪರಸ’ - ಎಂಟು ಮರಗಳಿಂದ ವರ್ಷಕ್ಕೆ 1 ಲಕ್ಷ ಆದಾಯ !
- Fri, Mar 06 2020 01:07:20 PM
-
ಕುಂದಾಪುರ, ಮಾ 6 (Daijiworld News/MSP): ತೆಂಗು ಧಾರಣೆ ಕೊರತೆ ಎದುರಿಸುತ್ತಿದ್ದರೆ ತೆಂಗಿನ ಮೂಲಕ ಆರ್ಥಿಕ ಲಾಭದಾಯಕ ಮೌಲ್ಯವರ್ಧಿತ ಉತ್ಪನ್ನಗಳ ಶೋಧ ನಡೆಯುತ್ತಲೇ ಇದೆ. ಅದರಲ್ಲಿ ಕಲ್ಪರಸ ಎನ್ನುವ ವಿನೂತನ ವಿಧಾನ ಸಾಕಷ್ಟು ಭರವಸೆ ಮೂಡಿಸಿ, ಉಡುಪಿ ಜಿಲ್ಲೆಯಲ್ಲಿ ಆರಂಭಕ್ಕೆ ಮೊದಲೇ ಭಾರೀ ಸಂಚಲನ ಮೂಡಿಸಿದೆ. ಭಾರತೀಯ ಕಿಸಾನ್ ಸಂಘ ಮತ್ತು ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಗಳ ಮಾರ್ಗದರ್ಶನದಲ್ಲಿ ಆರಂಭವಾಗಿರುವ ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಾಂಬಾರ ಉತ್ಪಾದಕರ ಕಂಪೆನಿ (ಉಕಾಸ್)ಯ ಯೋಜನೆ ಇದಾಗಿದೆ.
ಎಳನೀರಿಗಿಂತ ಮೂರು ಪಟ್ಟು ಪೌಷ್ಟಿಕಾಂಶ ಹೊಂದಿರುವ ಕಲ್ಪರಸ ಆರೋಗ್ಯವರ್ಧಕ ಪಾನೀಯ ಎಂದು ಸಾಭೀತಾಗಿದೆ. ಕಲ್ಪವೃಕ್ಷಕ್ಕೆ ಯಾವುದೇ ಅಮಲು ಪದಾರ್ಥವಲ್ಲ. ಶೇ.0% ಅಲ್ಕೋಹಾಲ್ ಆಗಿರುವ ಕಲ್ಪರಸ ಹುಳಿಯಾಗದಂತೆ ತಾಪಮಾನ ನಿಯಂತ್ರಣ ವ್ಯವಸ್ಥೆಯಲ್ಲಿ ಶೇಖರಿಸಿ, ಸಂಸ್ಕರಿಸಿ ಮಾರುಕಟ್ಟೆ ವೈಜ್ಞಾನಿಕ ಮಾದರಿಯಲ್ಲಿ ವಿತರಿಸುವ ವ್ಯವಸ್ಥೆ ರಾಜ್ಯದಲ್ಲಿಯೇ 2ನೇ ಘಟಕವಾಗಿ ಉಡುಪಿ ಜಿಲ್ಲೆಯ ಜಪ್ತಿಯಲ್ಲಿ ಇದೇ ಏಪ್ರಿಲ್ ಮೊದಲ ವಾರ ಕಾರ್ಯಾರಂಭ ಮಾಡಲಿದೆ. ಅದಕ್ಕೆ ಈಗಾಗಲೇ ಅಬಕಾರಿ ಇಲಾಖೆಯಿಂದ ಪರವಾನಿಗೆ ದೊರಕಿದ್ದು, ಅಂತಿಮ ಪರವಾನಿಗೆ ಲಭಿಸಿದ ತಕ್ಷಣ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಬೆಂಗಳೂರು, ಭದ್ರಾವತಿಯಲ್ಲಿ ಯಶಸ್ವಿಯಾಗಿ ಮುನ್ನೆಡೆಯುತ್ತಿರುವ ಈ ಘಟಕ ಈ ಭಾಗದ ತೆಂಗು ಬೆಳೆಗಾರರ ನೆರವಿಗೆ ನಿಲ್ಲಬೇಕು ಎನ್ನುವ ನೆಲೆಯಲ್ಲಿ ಮಾಡಲಾಗುತ್ತಿದೆ.
ಭಾರತೀಯ ಕಿಸಾನ್ ಸಂಘದ ಪ್ರಾಯೋಜಕತ್ವದಲ್ಲಿ ಈಗಾಗಲೇ ಜಿಲ್ಲೆಯಾಧ್ಯಂತ 54 ತೆಂಗು ಬೆಳೆಗಾರರ ಸೊಸೈಟಿಗಳಿದ್ದು, ಅವುಗಳಲ್ಲಿ 4820 ಮಂದಿ ತೆಂಗು ಬೆಳೆಗಾರರರಿದ್ದಾರೆ. ಕಲ್ಪರಸವನ್ನು ಪ್ರಥಮವಾಗಿ ತೆಂಗುಬೆಳೆಗಾರರ ಸೊಸೈಟಿಯಲ್ಲಿ ಸದಸ್ಯರ ತೋಟದ 8ರಿಂದ 10 ತೆಂಗಿನ ಮರಗಳನ್ನು ಮಾತ್ರ ಕಲ್ಪರಸ ತಗೆಯಲು ಆಯ್ದುಕೊಳ್ಳಲಾಗುತ್ತದೆ. ಏಪ್ರಿಲ್ ಜಪ್ತಿ ಮತ್ತು ಹಾಲಾಡಿ ಗ್ರಾಮಗಳ ವ್ಯಾಪ್ತಿಯ ರೈತರ ಮರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
8 ಮರಗಳಿಂದ ಕಲ್ಪರಸ ಇಳಿಸಲು ನೀಡಿದರೆ ವಾರ್ಷಿಕ ಕನಿಷ್ಠ 1 ಲಕ್ಷ ರೂಪಾಯಿ ಗಳಿಸಬಹುದು. ಕಲ್ಪರಸವನ್ನು ನಿತ್ಯ ಇಳಿಸುವ ಜವಾಬ್ದಾರಿಯನ್ನು ಆ ರೈತರೇ ಮಾಡಿದರೆ ವಾರ್ಷಿಕ 2 ಲಕ್ಷಕ್ಕೂ ಅಧಿಕ ಹಣವನ್ನು 8-10 ಆರೋಗ್ಯವಂತ ಮರಗಳಿಂದ ಗಳಿಸಬಹುದು ಎನ್ನುತ್ತಾರೆ ಸತ್ಯನಾರಾಯಣ ಉಡುಪರು.
ಕಲ್ಪರಸವನ್ನು ಸಂಗ್ರಹಿಸುವುದು ನಮ್ಮಲ್ಲಿಯ ಸಾಂಪ್ರಾದಾಯಿಕ ಶೇಂಧಿ ತಗೆದಂತೆ. ಕಲ್ಪರಸವನ್ನು ವೈಜ್ಞಾನಿಕವಾಗಿ ಸಂಗ್ರಹಿಸಲಾಗುತ್ತದೆ. ಹುಳಿಯಾಗದಂತೆ ತಾಪಮಾನ ನಿಯಂತ್ರಕ ಬಾಕ್ಸ್ಗಳಲ್ಲಿ ಸಂಗ್ರಹಿಸಿ, ಸೊಸೈಟಿಗಳಿಗೆ ಸರಬರಾಜು ಮಾಡಲಾಗುತ್ತದೆ. ಮೊದಲಿಗೆ ಆರೋಗ್ಯವಂತ ತೆಂಗಿನ ಮರಗಳನ್ನು ಆಯ್ಕೆ ಮಾಡಿಕೊಂಡು, ಗೊನೆಗಳಿಗೆ ಇಂಚಿಗೊಂದರಂತೆ ಕಟ್ಟು ಹಾಕಿ, 25 ಪೆಟ್ಟುಗಳನ್ನು ಹಾಕಬೇಕು. ನಂತರ ಅದಕ್ಕೆಂದೇ ಸಿದ್ಧಪಡಿಸಲಾದ ಪಾತ್ರೆಯನ್ನು ಗೊನೆಗೆ ಜೋಡಿಸಬೇಕು. ಆ ಪಾತ್ರೆಯ ಒಳಗೆ ಒಂದು ಕೆಜಿಯಷ್ಟು ಐಸ್ ಇಡಬೇಕು. ಪಾಲಿಥೀನ್ ಕವರನ್ ಕಡಿದ ಗೊನೆಗೆ ಸಿಕ್ಕಿಸಿ, ಪಾತ್ರೆಯೊಳಗೆ ಇರಿಸಬೇಕು. ಗೊನೆಯಿಂದ ರಸ ಸ್ರವಿಸುತ್ತಾ ಪ್ಲಾಸ್ಟಿಕ್ಕವರ್ಗೊಳಗೆ ಬೀಳುತ್ತದೆ. ಐಸ್ ಇರುವುದರಿಂದ ಯಥಾಸ್ಥಿತಿಯಲ್ಲಿರುತ್ತದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಇದನ್ನು ರಸವನ್ನು ಇನ್ನೊಂದು ಮಂಜುಗಡ್ಡೆ ಇರುವ ಪಾತ್ರೆಯೊಳಗೆ ಸಂಗ್ರಹಿಸಿ ಹತ್ತಿರದ ಸೊಸೈಟಿಗಳಿಗೆ ತಲುಪಿಸಬೇಕು. ಒಂದು ಮರದಿಂದ 2 ಲೀಟರ್ ತನಕ ಕಲ್ಪರಸ ಸಿಗುತ್ತದೆ. ಕಲ್ಪರಸ ಇಳಿಸುವ ಪಾತ್ರೆಯನ್ನು ಸಿಪಿಸಿಆರ್ಐ ಸಂಸ್ಥೆಯೇ ರೂಪಿಸಿ ಅವರೇ ಸರಬರಾಜು ಮಾಡುತ್ತಾರೆ. ಕಲ್ಪರಸ ಸಂಗ್ರಹಣೆಯನ್ನು ಪ್ರತಿ ಊರಿನಲ್ಲಿ ಹಾಲು ಉತ್ಪಾದಕರ ಸಂಘದಂತೆ ತೆಂಗು ಬೆಳೆಗಾರರ ಫೆಡರೇಶನ್ ಮೂಲಕ ಸಂಗ್ರಹಿಸಲಾಗುತ್ತದೆ.
ಹೀಗೆ ಸಂಗ್ರಹಿಸಲಾದ ರಸವನ್ನು ಹುಳಿಯಾಗದಂತೆ ತಾಪಮಾನ ನಿಯಂತ್ರಕ ಬಾಕ್ಸ್ಗಳಲ್ಲಿ ಇರಿಸಿ, ಘಟಕದಲ್ಲಿ ವೈಜ್ಞಾನಿಕ ವಿಧಾನಗಳ ಮೂಲಕ ಸಂಸ್ಕರಿಸಿ ಆರೋಗ್ಯಕಾರಿ ಜ್ಯೂಸ್ಗಳಾಗಿ 200 ಎಂ.ಎಲ್ ಬಾಟೆಲ್ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಮಾರಾಟಕ್ಕೆ ಔಟ್ಲೇಟ್ಗಳ ಪ್ರಾರಂಭಿಸಲಾಗುತ್ತದೆ. ಕಂಪೆನಿಯ ಮೂಲಕವೇ ಮಾರಾಟವಾಗುತ್ತದೆ. ಪ್ರಾರಂಭದಲ್ಲಿ ಜಪ್ತಿ ಮತ್ತು ಸುಣ್ಣಾರಿಯಲ್ಲಿ ಪಾರ್ಲರ್ ತೆರೆಯುವ ಚಿಂತನೆಯನ್ನು ಹೊಂದಿದೆ.
ಕಲ್ಪರಸ ಇಳಿಸುವ ಎಲ್ಲ ಪರಿಕರಗಳನ್ನು ಕಂಪೆನಿಯೇ ಒದಗಿಸುತ್ತದೆ. ಮರ ಏರಲು 45 ಅಡಿಗಳಷ್ಟು ಆಲ್ಯೂಮಿನಿಯಂ ಎಣಿ ಬಳಕೆ ಮಾಡುವುದು ಅಥವಾ ಟಯರ್ಗಳನ್ನು ಪ್ರತೀ ಮರಕ್ಕೆ ಜೋಡಿಸಿ ಸುಲಭವಾಗಿ ಮರ ಏರುವ ವಿಧಾನ ಮಾಡಲಾಗುತ್ತದೆ. ಟ್ಯಾಪಿಂಗ್ ಮಾಡುವವರ ಆರೋಗ್ಯ ರಕ್ಷಣೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಂಗ್ರಹಿಸಿದ ಕಲ್ಪರಸ ಹತ್ತಿರದ ಸೊಸೈಟಿಗೆ ತಲುಪಿಸಲು ವಾಹನದ ವ್ಯವಸ್ಥೆಯನ್ನು ಮಾಡಲಿದೆ.
ಕಲ್ಪರಸ ಸಂಗ್ರಹಣೆಗೆ ಕಾನೂನಿನ ಅಡೆತಡೆಗಳು ಇವೆ. ತಂತ್ರಜ್ಞಾನ ಬಳಸಿ ಕಲ್ಪರಸ ಸಂಗ್ರಹ ಮಾಡಬೇಕು. ಕಾನೂನು ಪ್ರಕಾರ ನೇರವಾಗಿ ರೈತರಿಗೆ ಕಲ್ಪರಸ ಸಂಗ್ರಹಿಸಲು ಅವಕಾಶವಿಲ್ಲ. ಪರವಾನಿಗೆ ಪಡೆದುಕೊಂಡಿರುವ ಕಂಪೆನಿಗಳ ಮೂಲಕ ಆಗಬೇಕು. ಉಕಾಸ್ ಸಂಸ್ಥೆಯ ಮೂಲಕ ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಎರಡನೇಯ ಕಲ್ಪರಸ ಘಟಕ ಆರಂಭಕ್ಕೆ ಕುತೂಹಲ ಮೂಡಿಸಿದೆ.
ಕಲ್ಪರಸಕ್ಕೆ ಯಾವುದೇ ಅಮಲು ಇಲ್ಲ
ಕಲ್ಪರಸ 0% ಅಲ್ಕೋಹಾಲ್. ಹುಳಿಯಾಗಲು ಅವಕಾಶವನ್ನೇ ನೀಡುವುದಿಲ್ಲ. ಈ ಕಲ್ಪರಸವನ್ನು 1ರಿಂದ ೪ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಿಡಲಾಗುತ್ತದೆ. ಇದು ಎಳನೀರಿಗಿಂತಲೂ ಸ್ವಾದಿಷ್ಟಕಾರಿಯಾಗಿದೆ. ಮಾತ್ರವಲ್ಲ ಎಳನೀರಿಗಿಂತ 3 ಪಟ್ಟು ಶಕ್ತಿಶಾಲಿ. ಕೊಲೆಸ್ಟಾಲ್ ನಿಯಂತ್ರಿಸುತ್ತದೆ. ದೇಹಕ್ಕೆ ಅಧಿಕ ಪ್ರಮಾಣದ ವಿಟಮಿನ್ ಒದಗಿಸುತ್ತದೆ. ಮಧುಮೇಹಿಗಳು ಸೇವಿಸಬಹುದಾಗಿದೆ. ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಕಿಡ್ನಿ ಸ್ಟೋನ್ ನಿವಾರಿಸುತ್ತದೆ. ಕಣ್ಣು, ಲೀವರ್ನ ಆರೋಗ್ಯ ಹೆಚ್ಚಿಸುತ್ತದೆ ಎನ್ನುವ ಅಂಶವನ್ನು ಕೇಂದ್ರೀಯ ಸಂಶೋಧನಾ ಸಂಸ್ಥೆ ದೃಢಪಡಿಸಿದೆ.ಲಕ್ಷಗಳ ಲೆಕ್ಕಚ್ಚಾರ ಹೀಗೆ...
ಇತ್ತೀಚೆಗಿನ ವರದಿಗಳ ಪ್ರಕಾರ ಮರಕ್ಕೆ ಶಿಪಾರಸ್ಸು ಮಾಡಿದ ಪ್ರಕಾರ ನೀರು ಗೊಬ್ಬರ ಕೊಡುತ್ತಿದ್ದರೆ ಒಂದು ಮರದಿಂದ ಕನಿಷ್ಠ ೨ ಲೀಟರ್ ಕಲ್ಪರಸ ದೊರೆಯುತ್ತದೆ. 365 ದಿನವೂ ರಸ ತಗೆಯಬಹುದು. ಒಂದು ಮರದಿಂದ ವರ್ಷಕ್ಕೆ700 ಲೀಟರ್ ಕಲ್ಪರಸ ಸಿಗುತ್ತದೆ. ಮರದ ಒಡೆಯನಿಗೆ ಲೀಟರ್ಗೆ 20, ಟ್ಯಾಪಿಂಗ್ ಮಾಡುವವರಿಗೆ 30 ರೂಪಾಯಿ ನೀಡಲಾಗುತ್ತದೆ. ಒಂದು ಮರದಿಂದ 14ಸಾವಿರ ಆದಾಯ ಸಿಗುತ್ತದೆ. ವರ್ಷಕ್ಕೆ 8-10ಮರಗಳಿಂದ ಒಂದು ಲಕ್ಷ ಗಳಿಸಲು ಸಾಧ್ಯವಿದೆ. ಟ್ಯಾಪಿಂಗ್ ಕೆಲಸವನ್ನು ಮರದ ಮಾಲಿಕರೇ ಮಾಡಿದರೆ 2 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಬಹುದು ಎನ್ನುತ್ತಾರೆ ಸತ್ಯನಾರಾಯಣ ಉಡುಪರು.