ಮಂಗಳೂರು, ಮಾ 06(DaijiworldNews/SM): ದೈವ, ದೇವರುಗಳ ಮುಂದೆ ಯಾವ ಅಧಿಕಾರವೂ ಶೂನ್ಯ. ದೇವರ ಇಚ್ಛೆಯಂತೆ ನಾವು, ನೀವು. ನಾವು ಪಾತ್ರಧಾರಿಗಳಷ್ಟೇ. ಧಾರ್ಮಿಕ ಕಾರ್ಯಗಳಿಗೆ ನನ್ನ ಸೇವೆ ಸದಾ ನಿರಂತರ ಇದ್ದೇ ಇರುತ್ತದೆ ಎಂದು ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ ಹೇಳಿದ್ದಾರೆ.
ಅವರು ಜಲ್ಲಿಗುಡ್ಡೆ ಬಜಾಲ್ನ ಸೋನಾಳಿಕೆ ನಾಗಬ್ರಹ್ಮ ವನದುರ್ಗಾ ಮತ್ತು ಪರಿವಾರ ದೇವರ ಸನ್ನಿಧಿಯಲ್ಲಿ ಪುನರ್ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ ಮಾತನಾಡಿ ದೇವರ ಕಾರ್ಯ ನಡೆಸಲು ಯೋಗ ಭಾಗ್ಯ ಕೂಡಿ ಬರಬೇಕು. ಬರೇ ಅಧಿಕಾರ ಅಂತಸ್ತಿನಿಂದ ಸಾಧ್ಯವಾಗುವುದಿಲ್ಲ. ಎಲ್ಲರಿಗೂ ಹುಟ್ಟು ಸಾವು ಖಚಿತ. ಅದರ ನಡುವೆ ಒಳ್ಳೆಯ ಕಾರ್ಯ ಮಾಡಬೇಕು. ಸತ್ತ ಮೇಲೂ ನಮ್ಮ ಹೆಸರು ಶಾಶ್ವತವಾಗಿರಬೇಕಾದರೆ ನಮಗೆ ಸಿಕ್ಕಿರುವ ಮಾನವ ಜನ್ಮದಲ್ಲಿ ಪುಣ್ಯಕಾರ್ಯ ಮಾಡೋಣ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ ಮಾತನಾಡಿ ನಿತ್ಯ ಜೀವನದಲ್ಲಿ ಪ್ರಾಥನೆ, ಭಜನೆ, ಆರಾಧನೆ ಮನಸ್ಸನ್ನು ಶಾಂತಗೊಳಿಸಿ, ನಮ್ಮ ಕ್ರಿಯಾಶೀಲತೆಯನ್ನು ಜಾಗೃತಿಗೊಳಿಸಿ, ಉತ್ತಮವಾದ ಚಿಂತನೆಯನ್ನು ಮೂಡಿಸುತ್ತದೆ. ಹಲವಾರು ಕಷ್ಟದ ಸಂದರ್ಭದಲ್ಲಿ, ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣ ನಮ್ಮಲ್ಲಿ ಮೂಡಬೇಕು ಎಂದರು.
ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ಬಿಜೆಪಿ ನಾಯಕ ವಿಜಯ್ ಕುಮಾರ್ ಶೆಟ್ಟಿ, ಅದ್ಯಪಾಡಿ ಆದಿನಾಥೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ಶೆಡ್ಡೆ ಮಂಜುನಾಥ ಭಂಡಾರಿ, ಅಶೋಕ್ಶರ್ಮ, ಕೀರ್ತನ್ ಲಾಡ್, ಜ್ಯೋತಿಷ್ಯ ವಿದ್ವಾನ್ ವೆಂಕಟೇಶ್ ಐತಾಳ್, ರವೀಂದ್ರ ಶೆಟ್ಟಿ, ಚಂಚಲ ತೇಜೋಮಯ, ಸಂದೀಪ್ ಶೆಟ್ಟಿ ಎಕ್ಕೂರು, ರಾಜೇಶ್ ಎಸ್ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.