ಕರಾವಳಿ, ಮಾ 06(DaijiworldNews/SM): ನಮ್ಮ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತನ್ನಿ, ಕರಾವಳಿಗೆ ಮಾರಕವಾಗಿರುವ ಯೋಜನೆಯನ್ನು ನಾವು ರದ್ದುಗೊಳಿಸುತ್ತೇವೆ ಎಂದಿದ್ದ ಬಿಜೆಪಿಗರು ಇಂದು ಅಧಿಕಾರ ಸಿಕ್ಕಿದಾಕ್ಷಣ ಊಸರವಳ್ಳಿಯಂತೆ ತಮ್ಮ ವರಸೆ ಬದಲಾಯಿಸಿದ್ದಾರೆ.
೨೦೧೬ರಲ್ಲಿ ಎತ್ತಿನಹೊಳೆ ಯೋಜನೆಗೆ ಅನುದಾನವನ್ನು ನೀಡಿ ಯೋಜನೆಯ ಕಾಮಗಾರಿ ಪ್ರಾರಂಭವಾದಾಗ ಯಾವ ಪಕ್ಷ ಕರಾವಳಿಯ ಜನತೆಯ ಕೂಗಾಗಿ ಜನತೆಯೊಂದಿಗೆ ಹೋರಾಟಕ್ಕಿಳಿದಿತ್ತೋ, ಹಾಗೂ ಯಾವ ಪಕ್ಷ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ರಥಯಾತ್ರೆ ನಡೆಸಿತ್ತೋ, ಅದೇ ಪಕ್ಷ ಇಂದು ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದರೂ ಕಾಮಗಾರಿಗೆ ಸಿಕ್ಕಿದ್ದ ವೇಗ ಕಡಿಮೆಯಾಗಿಲ್ಲ. ಸಾಲದ್ದಕ್ಕೆ ೨೦೨೦-೨೧ನೇ ಸಾಲಿನ ಬಜೆಟ್ ನಲ್ಲಿ ೧೫೦೦ ಕೋಟಿ ರೂಪಾಯಿ ಮೀಸಲಿಡುವ ಮೂಲಕ ಕರಾವಳಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಯಾವುದೇ ಕಾರಣಕ್ಕೂ ಯೋಜನೆ ಜಾರಿಗೊಳಿಸಲು ಬಿಡುವುದಿಲ್ಲ ಎಂದವರೇ ಯೋಜನೆ ಮತ್ತೊಂದು ಭಾಗಕ್ಕೆ ನೀರನ್ನು ಪೂರೈಸುವ ಯೋಜನೆ ಎಂಬುವುದಾಗಿ ಹೇಳಿ ಮುಗ್ದ ಜನರ ಸಿಂಪತಿ ಗಿಟ್ಟಿಸಿಕೊಳ್ಳುವ ಯತ್ನ ಕೂಡ ನಡೆಸಲಾಗುತ್ತಿದೆ. ಆದರೆ, ಯಾವ ಸರಕಾರ ಯೋಜನೆ ಜಾರಿಗೆ ತಂದಿತ್ತು, ಆ ಸಂದರ್ಭ ಪಕ್ಷ, ಜಾತಿ, ಭಾಷೆ, ಧರ್ಮ, ಜನಾಂಗದ ಎಲ್ಲೆ ಮೀರಿ ಪ್ರತಿಭಟಿಸಿದ್ದ, ಜನನಾಯಕರು, ಜನಸಾಮಾನ್ಯರು ಇದೀಗ ಬಜೆಟ್ ನಲ್ಲಿ ಅದೇ ಯೋಜನೆಯನ್ನು ಬೆಂಬಲಿಸಿ ಹಣ ಬಿಡುಗಡೆಗೊಳಿಸಿದಾಗ ಮೌನವಾಗಿದ್ದಾರೆ. ಕೆಲವೊಬ್ಬರು ಯೋಜನೆಯ ವಿರುದ್ಧವಾಗಿ ಮಾತುಗಳನ್ನು ಆಡುತ್ತಿದ್ದಾರೆ. ಕೆಲವರು ರಾಜ್ಯ ಸರಕಾರ ಕೈಗೊಂಡಿರುವ ನಿರ್ಧಾರ ತಪ್ಪು ಎಂಬುವುದಾಗಿ ಟೀಕಿಸಿದ್ದಾರೆ.
ಆದರೆ, ಯಾರು ಈ ಯೋಜನೆಯಿಂದ ಲಾಭವನ್ನು ಪಡೆಯುತ್ತಾರೆ ಅವರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಬಜೆಟ್ ನಲ್ಲಿ ಅನುದಾನ ಘೋಷಿಸಿದ್ದು ತಪ್ಪು ಎಂಬುವುದು ಕೆಲವರ ಅಭಿಪ್ರಾಯ. ಆದರೆ, ಸರಕಾರ ಆರಂಭಿಸಿದ ಯೋಜನೆಗೆ ಈಗಾಗಲೇ ಕೊಟ್ಯಾಂತರ ಹಣವನ್ನು ವ್ಯಯಿಸಲಾಗಿದೆ. ಬಹುತೇಕ ಕಾಮಗಾರಿಯನ್ನು ಮುಗಿಸಲಾಗಿದೆ. ಆರಂಭದಲ್ಲಿ ಯೋಜನೆಯನ್ನು ವಿರೋಧಿಸಿದ ಜನತೆ, ನಾಯಕರು, ರಾಜಕೀಯ, ಧಾರ್ಮಿಕ ಮುಖಂಡರು ನೇತ್ರಾವತಿಯನ್ನು ವಿನಾಶದ ಅಂಚಿಗೆ ಕೊಂಡೊಯ್ಯುವ ಕಾರ್ಯ ಭರದಿಂದ ನಡೆಯುತ್ತಿದ್ದ ಸಂದರ್ಭ ಮೌನಕ್ಕೆ ಶರಣಾಗಿದ್ದರು. ಆದರೆ, ಮುಕ್ಕಾಲು ಭಾಗ ಪೂರ್ಣವಾಗಿರುವ ಕಾಮಗಾರಿಯನ್ನು ಅರ್ಥಕ್ಕೆ ನಿಲ್ಲಿಸದೆ ಪೂರ್ಣಗೊಳಿಸುವುದು ಸರಕಾರದ ಉದ್ದೇಶ. ಹಾಗೂ ಆ ಯೋಜನೆಯ ಮೂಲಕ ಬಯಲು ಸೀಮೆಗೆ ನೀರು ಪೂರೈಸಬೇಕೆನ್ನುವುದು ಆಡಳಿತ ವರ್ಗದ ಮಹದಾಸೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಈ ಬಾರಿಯ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಲಾಗಿದೆ.
ಆದರೆ, ಬಿಜೆಪಿ ಸರಕಾರ ಕೈಗೊಂಡಿರುವ ನಿರ್ಧಾರ ಜನಸಾಮಾನ್ಯರಿಗೆ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಕಾಣುತ್ತಿದೆ. ಆದರೆ, ಕೆಲವೊಂದು ಬುದ್ದಿ ಜೀವಿಗಳು ಮಾತ್ರ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೌನವಾಗಿವೆ.
ದ.ಕ. ಜಿಲ್ಲೆ ಬರಿದಾಗಿಸುವುದು ವ್ಯವಸ್ಥಿತ ಸಂಚು:
ಇನ್ನು ಬಜೆಟ್ ನಲ್ಲಿ ಅನುದಾನ ಮೀಸಲಿರಿಸಿದ ಬೆನ್ನಲ್ಲೆ ಕರಾವಳಿಯ ಪರಿಸರ ಹೋರಾಟಗಾರರು ಯೋಜನೆಯನ್ನು ವಿರೋಧಿಸಿದ್ದಾರೆ. ಆಡಳಿತ ಪಕ್ಷದ ಸಂಸದರು ಶಾಸಕರೇ ಬಹುತೇಕವಾಗಿರುವ ಕರಾವಳಿಯಿಂದ ಯಾವೊಬ್ಬ ಶಾಸಕರು, ಸಂಸದರು, ಜನನಾಯಕರು ಈ ಯೋಜನೆಯನ್ನು ವಿರೋಧಿಸದಿರುವುದು ವ್ಯವಸ್ಥಿತ ಸಂಚು ಎಂಬುವುದು ಪರಿಸರ ಹೋರಾಟಗಾರರ ನಿಲುವಾಗಿದೆ. ಇನ್ನು ದ.ಕ. ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂಬುವುದಾಗಿ ಸರಕಾರ ಘೋಷಣೆ ಮಾಡಿರುವ ಹೊರತಾಗಿಯೂ ನೇತ್ರಾವತಿ ಬರಿದಾಗಿಸುವ ಎತ್ತಿನಹೊಳೆ ಯೋಜನೆಗೆ ಯಾವ ರೀತಿಯಲ್ಲಿ ಅನುದಾನ ಒದಗಿಸಿದ್ದಾರೆ ಎಂಬುವುದು ಹೋರಾಟಗಾರ ದಿನೇಶ್ ಹೊಳ್ಳ ಅವರ ಪ್ರಶ್ನೆಯಾಗಿದೆ. ಇನ್ನು ಬಯಲು ಸೀಮೆ, ಮಲೆನಾಡು ಪ್ರದೇಶದ ಜನತೆ ವಿರೋಧಿಸಿರುವ ಯೋಜನೆಗೆ ಕರಾವಳಿಯಲ್ಲಿ ಪ್ರಬಲ ವಿರೋಧವಿದೆ. ಆದರೆ, ಸರಕಾರ ಮಾತ್ರ ಯಾವ ಕಾರಣಕ್ಕೆ ಯೋಜನೆ ಜಾರಿಗೆ ತರುತ್ತಿದೆ ಎಂಬುವುದು ಪ್ರಶ್ನೆಯಾಗಿದೆ ಎಂದು ದಿನೇಶ್ ಹೊಳ್ಳ ತಿಳಿಸಿದ್ದಾರೆ.
ಒಟ್ಟಿನಲ್ಲಿ ಇದೀಗ ರಾಜ್ಯ ಸರಕಾರ ಕರಾವಳಿಗರ ವಿರೋಧವನ್ನು ಹೊಂದಿರುವ ಎತ್ತಿನಹೊಳೆ ಯೋಜನೆಗೆ ಅನುದಾನವನ್ನು ಮೀಸಲಿರಿಸಿದ್ದು, ಕರಾವಳಿಗರಲ್ಲಿ ಅಸಮಾಧಾನ ಮೂಡಿಸಿದೆ. ಆದರೆ, ಜನನಾಯಕರು ತುಟಿ ಪಿಟಿಕ್ ಎನ್ನದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.