ಬೆಳ್ತಂಗಡಿ, ಮಾ 06 (DaijiworldNews/SM): ಇಲ್ಲಿನ ಇಂದಬೆಟ್ಟು ಗ್ರಾಮದ ಎರ್ಮಲ್ ಸಮೀಪ ಮನೆಯೊಂದರಲ್ಲಿ ಅಕ್ರಮವಾಗಿ ಜಾನುವಾರು ಮಾಂಸ ಕಡಿದು ಮಾರಾಟಕ್ಕೆ ಶೇಖರಿಸಿಟ್ಟ ಪ್ರಕರಣದಲ್ಲಿ ಓರ್ವನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಇಂದಬೆಟ್ಟು ಎರ್ಮಲ್ ನಿವಾಸಿ ಮೆಹಬೂಬ್ ಎಂಬಾತ ಪ್ರಕರಣದ ಆರೋಪಿಯಾಗಿದ್ದಾನೆ. ಈತನನ್ನು ಬಂಧಿಸಿ ಸುಮಾರು 108 ಕೆ.ಜಿ. ಜಾನುವಾರು ಮಾಂಸ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಹಸನಬ್ಬ ಎಂಬುವನ ಮನೆಯಲ್ಲಿ ಅಕ್ರಮವಾಗಿ ಮಾಂಸ ಕಡಿದು ಮಾರಾಟ ಮಾಡುತ್ತಿರುವ ಕುರಿತು ಅನುಮಾನಗೊಂಡು ಪೊಲೀಸರು ತನಿಖೆ ನಡೆಸಿದಾಗ, ಸ್ಥಳದಲ್ಲಿದ್ದ ಹಸನಬ್ಬ ಓಡಿಹೋಗಿದ್ದು, ಮೆಹಬೂಬ್ನನ್ನು ಬಂಧಿಸಲಾಗಿದೆ. ಅಂದಾಜು 30,500 ರೂ. ಮೌಲ್ಯದ 108 ಕೆ.ಜಿ. ಮಾಂಸ ವಶಕ್ಕೆ ಪಡೆಯಲಾಗಿದೆ.
ಘಟನೆಯ ಕುರಿತಂತೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.