ಕಾರ್ಕಳ, ಮಾ 06 (DaijiworldNews/SM): ಎರಡನೇ ಹೆರಿಗೆಗಾಗಿ ಕಾರ್ಕಳದ ತಾಲೂಕು ಸರಕಾರಿ ಆಸ್ಪತ್ರೆ ದಾಖಲಾಗಿದ್ದ ಗರ್ಭಿಣಿಯೊಬ್ಬರು ವೈದ್ಯರ ನಿರ್ಲಕ್ಷ್ಯಕ್ಕೆ ಮೃತಪಟ್ಟಿದ್ದು, ಈ ಕುರಿತು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಯೋಗಿತ(31) ಘಟನೆಯಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಈ ಕುರಿತು ಆಕೆಯ ಸಹೋದರ ಮುಂಡ್ಕೂರಿನ ಸತೀಶ್ ಆಚಾರ್ಯ ಕಾರ್ಕಳ ನಗರ ಠಾಣೆಗೆ ದೂರೊಂದು ನೀಡಿದ್ದಾರೆ. ಮದುವೆಯಾಗಿ ಆರು ವರ್ಷ ಕಳೆದಿದ್ದ ಯೋಗಿತ್ ಎರಡನೇ ಹೆರಿಗೆಗಾಗಿ ಫೆಬ್ರವರಿ ೨೨ರಂದು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯೆ ಅಪ್ಸರ್ ಹುಲ್ ಹುದಾರವರು ಗರ್ಭಿಣಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಗರ್ಭಕೋಶ ತೆರೆದಿದೆ ಎಂದು ತಿಳಿಸಿ ಔಷದಿ ನೀಡಿದ್ದರು.
ಫೆಬ್ರವರಿ ೨೪ರಂದು ವೈದ್ಯೆ ಅಪ್ಸರ್ ಹುಲ್ ಹುದಾರವರು ಯೋಗಿತ್ ಅವರ ಶಸ್ತ್ರ ಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿರುತ್ತಾರೆ. ಶಸ್ತ್ರ ಚಿಕಿತ್ಸೆಯ ನಂತರ ಆಕೆಗೆ ಮೂತ್ರ ವಿರ್ಸಜನೆ ತೊಂದರೆ ಆಗಿರುತ್ತದೆ. ಈ ನಡುವೆ ಬಿಳಿ ರಕ್ತ ಕಣಗಳು ಕಡಿಮೆಯಾಗಿದೆ ಎಂಬ ವೈದ್ಯರ ಸಲಹೆಯಂತೆ ಯೋಗಿತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಅಲ್ಲಿಯ ವೈದ್ಯರು ಯೋಗಿತ್ ಅವರನ್ನು ಪರೀಕ್ಷಿಸಿ ಚಿಕಿತ್ಸೆಗೆ ಅಸಾಧ್ಯವೆಂದು ತಿಳಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ವೆನ್ಲಾಕ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದರೂ ಸಾಯಂಕಾಲದವರೆಗೆ ಯಾವುದೇ ಔಷದಿಯನ್ನು ನೀಡದೇ ಇದ್ದ ಕಾರಣದಿಂದಾಗಿ ಯೋಗಿತ್ ಅವರನ್ನು ಮತ್ತೇ ಅಲ್ಲಿಂದ ಅತ್ತಾವರ ಬಳಿ ಇರುವ ಕೆಎಮ್ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅತ್ತಾವರ ಕೆಎಮ್ಸಿ ಆಸ್ಪತ್ರೆಯ ವೈದ್ಯರು ಪರೀಕ್ಷೆ ನಡೆಸಿ, ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲಿಯೇ ವೈದ್ಯರು ನಿರ್ಲಕ್ಷತನ ತೋರಿದ ಕಾರಣ ಗಂಭೀರ ಅಪಾಯದ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಔಷದೋಪಚಾರಗಳನ್ನು ಮುಂದುವರಿಸುತ್ತಾ ಡಯಾಲಿಸಿಸ್ ಚಿಕಿತ್ಸೆಗೆ ತುಂಬಾ ವೆಚ್ಚದಾಯಕವಾದ ಕಾರಣ ಆಕೆಯನ್ನು ಪುನ: ವೆನ್ಲಾಕ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ಗೋಸ್ಕರ ಸೇರಿಸಲಾಗಿತ್ತು. ಈ ನಡುವೆ ಚಿಕಿತ್ಸೆಗೆ ಸ್ಪಂದಿಸದ ಯೋಗೀತ್ ಮಾರ್ಚ್ ೫ರ ಸಂಜೆಇಹಲೋಕ ತ್ಯಜಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಕುರಿತು ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯೆ ಅಪ್ಸರ್ ಹುಲ್ ಹುದಾ ವಿರುದ್ಧ ಕೇಸುದಾಖಲಾಗಿದೆ.