ಶಿವಮೊಗ್ಗ, ಫೆ 14: ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನು ಕೆಲ ತಿಂಗಳೂ ಬಾಕಿ ಇರುವಂತೆಯೇ ಶಿವಮೊಗ್ಗ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಪೈಪೋಟಿ ಜೋರಾಗಿದೆ. ಇದರ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಭಿನ್ನಮತವೂ ಸ್ಪೋಟಗೊಂಡಿದೆ. ಮಾಜಿ ಉಪಮುಖ್ಯಮಂತ್ರಿ, ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ಕೈತಪ್ಪುವ ಭೀತಿಯಲ್ಲಿ ಪ್ರಾರಂಭವಾಗಿದೆ. ಈ ಭೀತಿಯಲ್ಲಿ ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್ ಮತ್ತೆ ಸಕ್ರಿಯವಾಗಿದೆ. ಈ ನಡುವೆ ಫೆ.14ರ ಬುಧವಾರ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದ ಮೀಟಿಂಗ್ ನಲ್ಲಿ ಕೆಲ ಬಿಜೆಪಿ ನಾಯಕರು ಈಶ್ವರಪ್ಪ ಅವರಿಗೆ ಟಿಕೆಟ್ ನೀಡಿದರೆ ಅವರಿಗೆ ಸೋಲು ಖಚಿತ ಎಂದು ಹೇಳಿದ್ದಾರೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ. ಹೀಗಾಗಿ ಟಿಕೆಟ್ ಕೈತಪ್ಪುವ ಸೂಚನೆ ಈಶ್ವರಪ್ಪ ಅವರ ಟೀಂಗೆ ಸಿಕ್ಕಿದ್ದರಿಂದ ಟಿಕೆಟ್ ಗಾಗಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಫೇಸ್ಬುಕ್ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ. ಈ ನಡುವೆ ಜಿಲ್ಲಾ ಬಿಜೆಪಿ ಕಚೇರಿ ಮುಂದೆ ಈಶ್ವರಪ್ಪ ಅವರ ಅಭಿಮಾನಿಗಳು ಅವರ ಪರ ಘೋಷಣೆಯನ್ನು ಕೂಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.