ಪುತ್ತೂರು, ಮಾ. 07 (Daijiworld News/MB) : ತಾಲೂಕಿನ 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ಬಾಲಕಿ ಮೇಳೆ ಅತ್ಯಾಚಾರ ಮಾಡಿ ಬೆದರಿಕೆ ಹಾಕಿದ್ದ ನೆಕ್ಕಿಲಾಡಿ ತಾಳೆಹಿತ್ಲು ನಿವಾಸಿ ರವಿ ಟಿ. ನಾಯ್ಕ (33) ಎಂಬಾತನಿಗೆ ಪುತ್ತೂರು ಐದನೇ ಹೆಚ್ಚುವರಿ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
2016 ರ ಅ.21 ರಂದು ಉಡ (ಚಟ್ಟೆ) ತೋರಿಸುತ್ತೇನೆ ಎಂದು ಬಾಲಕಿಯನ್ನು ಮನೆ ಸಮೀಪದ ಗುಡ್ಡಕ್ಕೆ ಕರೆದುಕೊಂಡು ಹೋದ ಆರೋಪಿ ಅಲ್ಲಿ ಅತ್ಯಾಚಾರ ಮಾಡಿ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ ಎಂದು ಆರೋಪ ಮಾಡಲಾಗಿತ್ತು.
ಉಪ್ಪಿನಂಗಡಿ ಪೊಲೀಸರು ಬಾಲಕಿಯ ತಾಯಿ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ಪೋಕ್ಸೋ ಮತ್ತು ಐಪಿಸಿಯಡಿ ಪ್ರಕರಣ ದಾಖಲು ಮಾಡಿ ತನಿಖೆ ನಡೆಸಿ ಮಂಗಳೂರು 2 ನೇ ಸೆಷನ್ಸ್ ನ್ಯಾಯಾಲಯ (ಪೋಕ್ಸೋ ವಿಶೇಷ ನ್ಯಾಯಾಲಯ)ದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದರು. ಈ ಪ್ರಕರಣದ ವಿಚಾರಣೆಯು ಮಂಗಳೂರಿನಲ್ಲಿ ನಡೆದಿದ್ದು ಬಳಿಕ ಪುತ್ತೂರು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.
ಆರೋಪಿಯನ್ನು ನ್ಯಾಯಾಲಯವು ಫೆ.14 ರಂದು ತಪ್ಪಿತಸ್ಥ ಎಂದು ಸಾಬೀತುಪಡಿಸಿದ್ದು ಈ ಸಂದರ್ಭದಲ್ಲಿ ತಪ್ಪಿತಸ್ಥ ನ್ಯಾಯಾಲಯದಲ್ಲಿ ಹಾಜರಿದ್ದ. ತೀರ್ಪನ್ನು ಫೆ. 15 ರಂದು ಪ್ರಕಟಿಸಲಿದ್ದು ಆ ದಿನ ಆತ ತಲೆಮರೆಸಿಕೊಂಡಿದ್ದ. ಬಳಿಕ ಆತನ ಬಂಧನಕ್ಕೆ ವಾರಂಟ್ ಹೊರಡಿಸಲಾಯಿತು. ತೀರ್ಪಿನ ಸಂದರ್ಭದಲ್ಲಿ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಕರು ಪಡಿಸಿದ್ದರು.
ಈ ಆರೋಪ ಸಾಬೀತಾಗಿದೆ ಎಂದು ತಿಳಿಸಿದ ಪುತ್ತೂರು ಪೋಕ್ಸೋ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ದೋಷಿಗೆ ಪೋಕ್ಸೋ ಕಾಯಿದೆಯಡಿ ಕಲಂ 370 ಮತ್ತು ಕಲಂ 6 ರಡಿ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷದ ಸಾದಾ ಶಿಕ್ಷೆ, 1 ವರ್ಷ ಶಿಕ್ಷೆ ಮತ್ತು 5 ಸಾವಿರ ರೂಪಾಯಿ ದಂಡ, ದಂಡ ತೆರಲು ತಪ್ಪಿದಲ್ಲಿ ಮೂರು ತಿಂಗಳ ಸಾದಾ ಶಿಕ್ಷೆ ಮತ್ತು ಕಲಂ 8 ರನ್ವಯ 3 ವರ್ಷ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಶಿಕ್ಷೆ ವಿಧಿಸಿದ್ದಾರೆ.
ದಂಡದ ಮೊತ್ತದಲ್ಲಿ 35 ಸಾವಿರ ರೂಪಾಯಿಯನ್ನು ಸಂತ್ರಸ್ತ ಬಾಲಕಿಗೆ ನೀಡುವಂತೆ ಮತ್ತು ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ದಂ.ಪ್ರ.ಸಂ. ಕಲಂ 357 (ಎ) ಮತ್ತು ಪೋಕ್ಸೋ ಕಲಂ 33 (8) ರ ಪ್ರಕಾರ ಬಾಲಕಿಗೆ 2.50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯವು ಆದೇಶಿಸಿದೆ.
ಅಂದಿನ ಪುತ್ತೂರು ಗ್ರಾಮಾಂತರ ಸಿಐ ಅನಿಲ್ ಎಸ್ ಕುಲಕರ್ಣಿ ಸಮಗ್ರ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿ ಸಾಕ್ಷ್ಯ ಹೇಳಿದ್ದಾರೆ. ಸರ್ಕಾರದ ಪರವಾಗಿ 12 ಸಾಕ್ಷ್ಯಗಳನ್ನು ವಿಚಾರಣೆ ಮಾಡಲಾಗಿದ್ದು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ವೈದ್ಯೆ ಡಾ| ಮೀನಾ ಕಿರಣ್ ಬಾಲಕಿಯ ಆರೋಗ್ಯ ಪರೀಕ್ಷೆ ನಡೆಸಿ ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿದಿದ್ದಾರೆ. ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.