ಮಂಗಳೂರು, ಮಾ. 07 (Daijiworld News/MB) : ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಕಡಲ ನಗರಿ ಮಂಗಳೂರಿನಲ್ಲಿ ನಡೆಯುವ ರಾಜ್ಯ ಪತ್ರಕರ್ತರ 35 ನೇ ಸಮ್ಮೇಳನಕ್ಕೆ ಆಕರ್ಷಕ ಮೆರವಣಿಗೆಯ ಮೂಲಕ ಸಂಭ್ರಮದ ಚಾಲನೆ ದೊರೆತಿದೆ.
ಸಮ್ಮೇಳನದಲ್ಲಿ ಸಾನ್ನಿಧ್ಯ ವಹಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಮ್ಮೇಳನದ ಉದ್ಘಾಟಕರಾದ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಮತ್ತಿತರ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ, ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ಆನಂದ ಶೆಟ್ಟಿ, ಸಮ್ಮೇಳನದ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಮತ್ತು ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಲ್ಲಕ್ಕಿಯಲ್ಲಿ ಇಂದಿನ ಪತ್ರಿಕೆಗಳನ್ನು ಮತ್ತು ಟಿವಿ ವಾಹನಿಗಳ ಲೋಗೋಗಳನ್ನು ಇರಿಸಿ ಗೌರವ ಪೂರ್ವಕವಾಗಿ ಮೆರವಣಿಗೆಯಲ್ಲಿ ತರಲಾಯಿತು.
ಪತ್ರಕರ್ತರ ನೋಂದಣಿ ಕಾರ್ಯವು ನಗರದ ಮಿನಿವಿಧಾನ ಸೌಧದ ಬಳಿಕ ತಾಲೂಕು ಪಂಚಾಯತ್ನ ನೂತನ ಕಟ್ಟಡದಲ್ಲಿ ನಡೆಯುತ್ತಿದ್ದು ಈಗಾಗಲೇ 1,800 ಕ್ಕೂ ಅಧಿಕ ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ. ಆ ಪೈಕಿ ಬಹುತೇಕ ಜನರು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ.
ಸಮ್ಮೇಳನವು ಪುರಭವನದ ದಿ. ವಡ್ಜಸೆರ್ ರಘುರಾಮ ಶೆಟ್ಟಿ ವೇದಿಕೆಯಲ್ಲಿ ನಡೆಯುತ್ತಿದೆ.