Karavali
ಕಾರ್ಕಳ: 'ಚುನಾವಣಾ ಪ್ರಣಾಳಿಕೆಗಳನ್ನು ಈಡೇರಿಸುವ ಹೊಣೆ ಜನಪ್ರತಿನಿಧಿಗಳದ್ದು' - ಸುನೀಲ್ಕುಮಾರ್
- Sat, Mar 07 2020 03:27:52 PM
-
ಕಾರ್ಕಳ, ಮಾ. 07 (Daijiworld News/MB) : ಚುನಾವಣೆ ಸಂದರ್ಭದಲ್ಲಿ ನೀಡುವ ಪ್ರಣಾಳಿಕೆಗಳನ್ನು ಈಡೇರಿಸುವ ಹೊಣೆಗಾರಿಕೆಯು ಜನಪ್ರತಿನಿಧಿಗಳದಾಗಿದೆ. ಭರವಸೆಗಳು ನನಸಾದಾಗ ಜನಪ್ರತಿನಿಧಿಗಳ ಮೇಲೆ ನಾಗರಿಕರು ವಿಶ್ವಾಸ ಇರಿಸುತ್ತಾರೆ ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ಕುಮಾರ್ ಹೇಳಿದರು.
ನಗರದ ರಥಬೀದಿಯಲ್ಲಿ ರೂ.13 ಕೋಟಿ ಅನುದಾನದಲ್ಲಿ ಕಾರ್ಕಳ ನಗರದ ಒಳಚರಂಡಿ ಮತ್ತು ಚರಂಡಿ ರೊಚ್ಚು ಸಂಸ್ಕರಣ ಘಟಕದ ನವೀಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಯೋಜನೆ ಪರಿಪೂರ್ಣ ಅಲ್ಲದೇ ಹೋದಾಗ ನಾಗರಿಕರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂತಹ ಘಟನಾವಳಿಯು ಹಿಂದೆ ನಿರ್ಮಾಣವಾಗಿದ್ದ ಒಳಚರಂಡಿ ಯೋಜನೆಯ ಕಾಮಗಾರಿಯಿಂದ ನಡೆದಿತ್ತು. 1993 ರಲ್ಲಿ ನಿರ್ಮಾಣಗೊಂಡಿದ್ದ ಒಳಚರಂಡಿ ಯೋಜನೆಯು ಆ ಕಾಲಕ್ಕೆ ಅನುಗುಣವಾಗಿತ್ತಾದರೂ, ಕಾಬೆಟ್ಟು ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಒಳಚರಂಡಿಯ ತ್ಯಾಜ್ಯ ನೀರು ಬಾವಿಗಳಿಗೆ ಸೋರಿಕೆಯಾಗ ತೊಡಗಿತ್ತು. ಸೊಳ್ಳೆ ಉತ್ಪಾದನೆ ಹೆಚ್ಚಳವಾಗಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಾಗರಿಕರಿದ್ದರು. ಬಹುವರ್ಷಗಳ ಬೇಡಿಕೆ, ನಿರೀಕ್ಷೆ ಯೋಜನೆಯು ಇದೀಗ ಸಕಾರವಾಗುತ್ತಿದೆ ಎಂದರು.
ಇಡೀ ಕಾರ್ಕಳ ಪುರಸಭೆ ವ್ಯಾಪ್ತಿಯನ್ನು ದೃಷ್ಠಿಕೋನದಲ್ಲಿ ಇಟ್ಟುಕೊಂಡು ಮೂರು ವರ್ಷಗಳ ಹಿಂದೆ ರೂ.140 ಕೋಟಿ ವೆಚ್ಚದಲ್ಲಿ ಸಮಗ್ರ ಒಳಚರಂಡಿ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಅದರಲ್ಲಿ 18 ವಲಯಗಳನ್ನು ಗುರುತಿಸಲಾಗಿತ್ತು. ಆದರೆ ವರ್ಷಂಪ್ರತಿ 1.5 ಕೋಟಿ ವೆಚ್ಚವು ಅದರ ನಿರ್ವಹಣೆಗೆ ತಗಲುವುದರಿಂದ ದೊಡ್ಡ ಹೊರೆ ಎಂಬ ಕಾರಣಕ್ಕೆ ಆ ಯೋಜನೆಯನ್ನು ಕೈಬಿಟ್ಟು ಪ್ರಸ್ತುತ ಇರುವಂತಹ ಒಳಚರಂಡಿ ಯೋಜನೆಯ ನವೀಕರಣ ಕಾಮಗಾರಿಗೆ ಒತ್ತು ನೀಡಲಾಗಿತ್ತೆಂಬ ಮಾಹಿತಿಯನ್ನು ಅವರು ಇದೇ ಸಂದರ್ಭದಲ್ಲಿ ನೀಡಿದರು.
ಯೋಜನೆ ಅನುಷ್ಠಾನಗೊಂಡಾಗ ಒಂದಿಷ್ಟು ದಿನ ವಿಳಂಬ ವಾಯಿತ್ತೆಂಬ ಕಾರಣಕ್ಕಾಗಿ ಇಲ್ಲ ಸಲ್ಲದ ಆರೋಪಗಳನ್ನು ಉಂಟು ಮಾಡುವ ಪ್ರಯತ್ನವನ್ನು ಕೆಲವರು ಮಾಡುತ್ತಾ ಬಂದಿದ್ದರು. ಅದಕ್ಕೆ ಇದೇ ಸಂದರ್ಭದಲ್ಲಿ ಶಾಸಕ ವಿ.ಸುನೀಲ್ಕುಮಾರ್ ಪ್ರತಿಕ್ರಿಯೆ ವ್ಯಕ್ತಪಡಿಸಿ ಜನರ ಚಪ್ಪಾಳೆಗಾಗಿ ಸುಳ್ಳು ಆಶ್ವಾಸನೆ ನೀಡುವ ಜಾಯಮಾನ ನನ್ನದಲ್ಲ. ಹಿಂದೆ ಮಾಡಿಲ್ಲ. ಮುಂದೆ ಮಾಡುವುದಿಲ್ಲ. ನೀಡಿದ ಮಾತು ಕೃತಿಯಲ್ಲಿ ತೋರಿಸುತ್ತೇನೆಂದು ಎದುರಾಳಿಗಳಿಗೆ ಪ್ರರೋಕ್ಷವಾಗಿ ಎಚ್ಚರಿಸಿದರು.
ರಾಜ್ಯ ವ್ಯಾಪ್ತಿ ವಿವಿದೆಡೆಗಳಲ್ಲಿ ಒಳಚೆರಂಡಿ ಯೋಜನೆಯ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರಕಾರವು ರೂ.300 ಕೋಟಿ ಅನುಮೋದಿಸಿತು. ವಿವಿಧ ಕಾರಣಗಳನ್ನು ಮುಂದಿಟ್ಟು ಇದೀಗ ಇತರ ಭಾಗಗಳ ಕಾಮಗಾರಿಗೆ ಅನುದಾನ ಬಿಡುಗಡೆಗೆ ಹೀಂದೇಟು ಹಾಕಿದ ಸರಕಾರವು ಕಾರ್ಕಳದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಿದೆ ಎಂದು ಅವರು ಉಲ್ಲೇಖಿಸಿದರು.
ಒಟ್ಟು 375 ಮ್ಯಾನ್ವೆಲ್ಗಳು
ನಗರದ ಪ್ರದೇಶದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಗಾಗಿ ಒಟ್ಟು 375 ಮ್ಯಾನ್ವೆಲ್ ಸಿದ್ಧಗೊಳ್ಳಲಿದೆ. ಮೊದಲ ಹಂತದ ಕಾಮಗಾರಿಯಲ್ಲಿ 23 ಮ್ಯಾನ್ವೆಲ್ಗಳಿರುತ್ತವೆ. ಹವಾಲ್ದಾರ್ಬೆಟ್ಟುನಲ್ಲಿ ಈಗಾಗಲೇ 14 ಸಿದ್ಧಮ್ಯಾನ್ವೆಲ್ ತಯಾರಾಗಿದೆ. ಆ ಮೂಲಕ ಕೆಲಸ ಕಾರ್ಯಗಳಿಗೆ ವೇಗ ಹೆಚ್ಚಾಗಲಿದೆ. ಪ್ರತಿಮನೆಗಳಲ್ಲಿ ಒಂದು ಚೇಂಬರ್ ರಚಿಸಿ ಆ ಮೂಲಕ ಮ್ಯಾನ್ವೆಲ್ಗಳಿಗೆ ಪೈಪ್ ಸಂಪರ್ಕಿಸುವುದರಿಂದ ಒಳಚರಂಡಿ ಸಮಸ್ಸೆಗಳು ಎದುರಾಗದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ಡಾಂಬರೀಕರಣಕ್ಕೆ ರೂ. 2.5ಕೋಟಿ
ಪ್ರಸಕ್ತ ವರ್ಷ ಒಳಚರಂಡಿ ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಮುಂದಿನ ವರ್ಷ ಡಾಂಬರೀಕರಣ ಕಾಮಗಾರಿ ನಡೆಯಲಿದೆ ಅದಕ್ಕಾಗಿ ರೂ.2.5 ಕೋಟಿ ಅನುದಾನ ಕಾದಿರಿಸಲಾಗಿದೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದರು.ಸ್ವರ್ಣ ಕಾರ್ಕಳ ಸಕಾರಗೊಳಿಸುವ...
ಮುಂಡ್ಲಿಯಿಂದ ಕಾರ್ಕಳಕ್ಕೆ ನೀರು ಸರಬರಾಜು ಮಾಡುವ ಯೋಜನೆಗೆ ಮೂವತ್ತು ವರ್ಷ ಸಂದಿದೆ. ಅದನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ 24 ಗಂಟೆಗಳ ಕಾಲ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ರೂ.60 ಕೋಟಿ ವೆಚ್ಚ ದಲ್ಲಿ ಹೊಸ ಯೋಜನೆಯ ಅನುಷ್ಠಾನ ಜೊತೆಗೆ ರಾಮಸಮುದ್ರ ಶುದ್ಧೀಕರಣ, ಆನೆಕೆರೆ ಹೂಳೆತ್ತುವ ಬಗ್ಗೆ ಇದೇ ಸಂದರ್ಭದಲ್ಲಿ ಶಾಸಕ ವಿ.ಸುನೀಲ್ಕುಮಾರ್ ಆಶ್ವಾಸನೆ ನೀಡಿದರು.
ಪಡುತಿರುಪತಿ ವೆಂಕಟ್ರಮಣ ದೇವಳದ ಒಂದನೇಯ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನ ಅಂದು ಅಭಿವೃದ್ಧಿಯಾಗದ ಅಂದಿನ ದಿನಕ್ಕೆ ಅನುಗುಣವಾಗಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರು ಕಾರ್ಕಳದಲ್ಲಿ ಒಳಚರಂಡಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದರು. ಬೆಳೆಯುತ್ತಿರುವ ನಗರದಲ್ಲಿ ಕ್ರಮೇಣ ಅದ್ದರಿಂದ ಕೆಲವೊಂದು ಸಮಸ್ಸೆಗಳು ಎದುರುಗೊಂಡಿತು. ಕುಡಿಯುವ ನೀರಿಗೆ ಆಶ್ರಯವಾಗಿದ್ದ ಆನೇಕ ಬಾವಿಗಳು ಕಲುಷಿತಗೊಂಡಿದ್ದವು. ಅದಕ್ಕೆ ಇದೀಗ ಶಾಶ್ವತ ಪರಿಹಾರ ದೊರಕಲಿದೆ. ನೈರ್ಮಲ್ಯ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ರಕ್ಷಿತ್ ಮಾತನಾಡಿದರು ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ನಡುವೆ ಪಟ್ಟಣ ಪ್ರದೇಶಗಳು ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಮೂಲ ಸೌಕರ್ಯ ಒದಗಿಸುವ ಅಗತ್ಯ ಇದೆ. ಮೂಲಸೌಕರ್ಯವೆಂದರೆ ಕೇವಲ ರಸ್ತೆ, ಪುಟ್ಪಾತ್, ರಸ್ತೆ ದೀಪ ಮಾತ್ರವಾಗಿರದೇ ಶುದ್ಧ ಕಡುಯುವ ನೀರು ಸರಬರಾಜು ಮಾಡುವುದು, ಶುಚಿತ್ವ ಪರಿಪಾಲನೆ ಮಾಡುವುದು ಒಳಗೊಂಡಿದೆ. ಅದು ಸಕಾರಗೊಳ್ಳಬೇಕಾದರೆ ಒಳಚರಂಡಿ ಯೋಜನೆಯು ಅಗತ್ಯವಾಗಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕ ಜನಾರ್ಧನ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯ ಪಾಲಕ ಅಭಿಯಂತರ ಹೆಲಿಬಲಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನಿಯರ್ ಸಂಶುದ್ದೀನ್, ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕೇಸ್ತರ ರತ್ನಾಕರ ಆಚಾರ್ಯ, ಅನಂತಶಯನ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಶಾಂತ್ ಭಟ್, ತಹಶೀಲ್ದಾರ್ ಪುರಂದರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.ಯೋಗೀಶ್ ಕಿಣಿ ಪ್ರಾರ್ಥನೆಗೈದರು. ರಾಜೇಂದ್ರ ನಿರೂಪಿಸಿದರು. ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಸ್ವಾಗತಿಸಿದರು. ಶೋಭಾ ದೇವಾಡಿಗ ಧನ್ಯವಾದವಿತ್ತರು.