ಉಪ್ಪಿನಂಗಡಿ, ಫೆ 16: ನೇತ್ರಾವತಿ ನದಿಯಲ್ಲಿ ರಾತ್ರಿ ಹಗಲೆನ್ನದೆ ಅಕ್ರಮವಾಗಿ ಮರಳು ತೆಗೆಯುವ ಕಾರ್ಯ ನಡೆಯುತ್ತಿದ್ದು, ಅಧಿಕಾರಿಗಳು ಕಣ್ಣಿದ್ದೂ ಕುರುಡಾಗುವ ಮೂಲಕ ಅಕ್ರಮ ದಂಧೆಕೋರರ ಬೆಂಬಲಕ್ಕೆ ನಿಂತಿದ್ದಾರೆ.
ಮರಳು ಲೂಟಿಯಿಂದಾಗಿ ಜಿಲ್ಲೆಯ ಜೀವನದಿಗಳು ನಲುಗಿ ಹೋಗಿವೆ. ಬಜತ್ತೂರು ಗ್ರಾಮದ ಬೆದ್ರೋಡಿ, ಮೊಗ್ರು ಗ್ರಾಮದ ಮುಗೇರಡ್ಕ ಪರಿಸರದಲ್ಲಿ ಹಗಲು ರಾತ್ರಿಯೆನ್ನದೆ ಮರಳು ಸಾಗಣೆ ನಡೆಯುತ್ತಿದೆ. ಒಂದೆಡೆ ಅಕ್ರಮ ಮರಳುಗಾರಿಕೆ, ಇನ್ನೊಂದೆಡೆ ಮರಳುಗಾರಿಕೆ ವಾಹನಗಳ ಕಿರಿಕಿರಿ. ಇವೆಲ್ಲವೂ ಗ್ರಾಮಸ್ಥರ ನೆಮ್ಮದಿಗೆ ತೊಂದರೆ ಮಾಡುತ್ತಿದೆ.
ಬೆದ್ರೋಡಿಯಲ್ಲಿ ಎರಡು ಕಡೆ ಮತ್ತು ಮೊಗ್ರು ಗ್ರಾಮದ ಮುಗೇರಡ್ಕದ ಎರಡು ಕಡೆ ಮರಳು ಅಡ್ಡೆಗಳು ನಿರ್ಮಾಣವಾಗಿದ್ದು, ಇಲ್ಲಿ ಮರಳು ದಂಧೆಕೋರರು ಎಗ್ಗಿಲ್ಲದೇ ಮರಳು ಲೂಟಿ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.