ಮಂಗಳೂರು, ಮಾ 8 (Daijiworld News/MSP): ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ದ ಎರಡನೇ ದಿನ ವಿಶೇಷ ಚಿಂತನ ಮಂಥನಕ್ಕೆ ನಾಂದಿ ಹಾಡಿತು.
ಇದೇ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸಮ್ಮೇಳನ ಕಡಲು ಹಾಗೂ ನದಿಗಳ ಸಂಗಮ ಪ್ರದೇಶವಾದ ಹಳೆ ಬಂದರು ಧಕ್ಕೆಯಲ್ಲಿ ರಾಣಿ ಅಬ್ಬಕ್ಕ ನೌಕೆಯಲ್ಲಿ (ಕ್ರೂಸ್) ಆರಂಭಗೊಂಡಿತು. 100ಕ್ಕೂ ಅಧಿಕ ಪತ್ರಕರ್ತರು, ಹಾಗೂ ಗಣ್ಯರನ್ನು ಹೊತ್ತ ಅಬ್ಬಕ್ಕ ಕ್ರೂಸ್ ಧಕ್ಕೆಯಿಂದ ಫಲ್ಗುಣಿ ನದಿ ನೀರಿನಲ್ಲಿ ತೇಲುತ್ತಾ ಸಾಗುತ್ತಿದ್ದಂತೆ ಚಿಂತನ ಮಂಥನ ಆರಂಭಗೊಂಡಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ್ ಹೆಗಡೆ ಉದ್ಘಾಟನಾ ನುಡಿಗಳನ್ನಾಡಿ, ಕರಾವಳಿಗೆ ಸಾಗರ ಮತ್ತು ನದಿಗಳು ಬಹು ದೊಡ್ಡ ಸಂಪತ್ತು. ಆದರೆ ನೆರೆಯ ರಾಜ್ಯಗಳಲ್ಲಿ ಆಗಿರುವ ಕರಾವಳಿ ಪ್ರವಾಸೋದ್ಯಮ ನಿರೀಕ್ಷಿತ ಮಟ್ಟದಲ್ಲಿ ನಮ್ಮಲ್ಲಿ ಆಗಿಲ್ಲ. ಆ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ಕ್ರಮ ವಹಿಸಲಾಗುವುದು ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ನೆರೆಯ ಗೋವಾ, ಕೇರಳದ ಸಮುದ್ರ ಪ್ರವಾಸೋದ್ಯಮ ಅಭಿವೃದ್ಧಿ ಗೆ ಹೋಲಿಸಿದರೆ ನಮ್ಮ ಕರಾವಳಿಯೂ ಅದ್ಭುತ ವಾದ ವೈವಿಧ್ಯತೆ ಯನ್ನು ಹೊಂದಿದೆ.ವಿದೇಶೀ ಯರು ಸೇರಿದಂತೆ ಪ್ರವಾಸಿಗರನ್ನು ಕೇಂದ್ರೀಕರಿಸಿಕೊಂಡು ಕರಾವಳಿಯ ವೈವಿಧ್ಯತೆಗೆ ಒತ್ತು ನೀಡಿ ಪ್ರವಾಸೋದ್ಯಮ ವನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದರು.
ಅತಿಥಿಗಳಾಗಿದ್ದ ಕ್ರೆಡೆಯ್ ಅಧ್ಯಕ್ಷ ಡಿ.ಬಿ. ಮೆಹ್ತಾ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಅವರೂ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಮುಖ್ಯ ಸ್ಥರಾದ ಕುಮಾರ್ ನಾಥ್, ವಿಜಯವಾಣಿಯ ಸುರೇಂದ್ರ ವಾಗ್ಲೆ, ಕನ್ನಡ ಪ್ರಭದ ರಾಘವೇಂದ್ರ ಭಟ್, ವಿಶ್ವವಾಣಿಯ ಜಿತೇಂದ್ರ ಕುಂದೇಶ್ವರ, ಡೆಕ್ಕನ್ ಹೆರಾಲ್ಡ್ನ ಹರ್ಷ ಮೊದಲಾದ ವರು ಕರಾವಳಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು. ಸಂಯುಕ್ತ ಕರ್ನಾಟಕದ ರಾಮಕೃಷ್ಣ, ವಾರ್ತಾಭಾರತಿಯ ಪುಷ್ಪರಾಜ್, ಹೊಸದಿಗಂತದ ಆನಂದ ಶೆಟ್ಟಿ, ಜಯ ಕಿರಣದ ಪ್ರಕಾಶ್ ಪಾಂಡೇಶ್ವರ, ಲಕ್ಷ್ಮಣ್ ಕುಂದರ್ ಉಪಸ್ಥಿತರಿದ್ದರು. ಪತ್ರಕರ್ತ ವಿಜಯ್ ಕೋಟ್ಯಾನ್ ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.
ರಾಣಿ ಅಬ್ಬಕ್ಕ ನೌಕೆಯಲ್ಲಿ ಚಿಂತನ ಮಂಥನ ನಡೆಯುತ್ತಿದ್ದಂತೆಯೇ ಪಲ್ಗುಣಿಯ ನದಿ ನೀರಿನಲ್ಲಿ ತೇಲುತ್ತಾ ಸಾಗಿದ ನೌಕೆ ನೇತ್ರಾವತಿ ನದಿ ಸೇತುವೆಯ ಬಳಿ ಸಾಗಿ ನೇತ್ರಾವತಿ ನದಿ ನೀರಲ್ಲಿ ತೇಲಿ ಬಳಿಕ ಅಲ್ಲಿಂದ ಮಂಗಳೂರು ಧಕ್ಕೆಗೆ ಹಿಂತಿರುಗಿತು. ನೌಕೆಯಲ್ಲಿದ್ದವರು ಕಡಲ ಸೊಬಗನ್ನು ಕಣ್ತುಂಬಿಸಿಕೊಂಡರು. ಪ್ರಥಮ ಬಾರಿಗೆ ಮಂಗಳೂರಿಗೆ ಅಗಮಿಸಿದವರು, ನೌಕೆಯಲ್ಲಿ ಸಂಚರಿಸಿದವರು ಕಣ್ಣಳತೆಯ ದೂರದಲ್ಲಿ ಕಾಣುತ್ತಿದ್ದ ಕಡಲ ಶಾಂತ ಅಲೆಗಳನ್ನು ನೋಡುತ್ತಾ ಸೆಲ್ಪಿಯನ್ನೂ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ತೇಲುವ ನೌಕೆಯಲ್ಲೇ ಉಪಹಾರ ದ ವ್ಯವಸ್ಥೆ ಯನ್ನು ಮಾಡಲಾಗಿತ್ತು.
ಭರವಸೆಗಳು ತೇಲಿ ಹೋಗದಿರಲಿ: ಡಾ. ಬಿ.ಎ. ವಿವೇಕ್ ರೈ
ಕರಾವಳಿ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಕುರಿತಂತೆ ನೀಡಲಾಗುವ ಭರವಸೆಗಳು ಸಮುದ್ರದ ಅಲೆಗಳಂತೆ ತೇಲಿ ಹೋಗದಿರಲಿ ಎಂದು ಚಿಂತನ ಮಂಥನ ದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಅಭಿಪ್ರಾಯಿಸಿದರು. ಸ್ಥಳೀಯ ಸಂಸ್ಕೃತಿ, ಆಚರಣೆ ಗಳಿಗೆ ಆದ್ಯತೆ ನೀಡಿ ಸ್ಥಳಿಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಸ್ಥಳೀಯ ಆಚರಣೆ, ವೈವಿಧ್ಯತೆ ಗಳ ನೇರ ಕಾರ್ಯಕ್ರಮಗಳು ವೆಬ್ಸೈಟ್ ನಲ್ಲಿ ಮಾಹಿತಿ ಸಿಗಬೇಕು. ಇದು ಪ್ರವಾಸಿಗರನ್ನು ಹೆಚ್ಚು ಸಂಖ್ಯೆ ಯಲ್ಲಿ ಆಕರ್ಷಿಸಬಹುದಾಗಿದೆ ಎಂದು ಅವರು ಹೇಳಿದರು.