ಕಾರ್ಕಳ, ಮಾ. 08 (Daijiworld News/MB) : ಕಾರಿನಲ್ಲಿಟ್ಟಿದ್ದ 2 ಲಕ್ಷ ರೂಪಾಯಿ ಹಣವನ್ನು ದೋಚಿದ ಖದೀಮರು ಕ್ಷಣಾರ್ಧದಲ್ಲೇ ಪರಾರಿಯಾದ ಘಟನೆ ಕಾಬೆಟ್ಟು ಎಂಬಲ್ಲಿ ಶನಿವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಹಣ ಕಳೆದು ಕೊಂಡವರು ಕಾಬೆಟ್ಟು ನಿವಾಸಿ ಮಾಲಿನಿ ಎಂಬವರು.
ಶ್ರೀ ದೇವಿ ಶಿಲ್ಪ ಕಲಾಕೇಂದ್ರದಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಪ್ರತಿ ಶನಿವಾರ ಕಾರ್ಮಿಕರ ವೇತನಕ್ಕಾಗಿ ಬ್ಯಾಂಕ್ನಿಂದ 2 ಲಕ್ಷ ರೂಪಾಯಿ ಡ್ರಾ ಮಾಡುತ್ತಿದ್ದರು. ಅದೇ ರೀತಿಯಾಗಿ ಹಣವನ್ನು ಡ್ರಾ ಮಾಡಿದ ಅವರು ತಮ್ಮ ಚಾಲಕನ ಜತೆ ಓಮ್ನಿ ಕಾರಿನಲ್ಲಿ ಬಂದು ದಿನಸಿ ಸಾಮಾಗ್ರಿ ಖರೀದಿಸಲೆಂದು ಕಾಬೆಟ್ಟು ಮಂಜುನಾಥ ಪ್ರಭು ಎಂಬವರ ಅಂಗಡಿ ಬಳಿ ಇಳಿದಿದ್ದರು.
ಈ ಸಂದರ್ಭದಲ್ಲಿ ಬೈಕ್ನಲ್ಲಿ ಹಿಂಬಾಲಿಸಿ ಬಂದ ಅಪರಿಚಿತರೊಬ್ಬರು ಕಾರಿನೊಳಗೆ ಇಟ್ಟಿದ್ದ ಎರಡು ಲಕ್ಷ ರೂಪಾಯಿಯನ್ನು ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಕಾರ್ಕಳದಲ್ಲಿ ಬ್ಯಾಂಕ್ನಿಂದ ಮಾಲಿನಿಯವರು ಹಣ ಡ್ರಾ ಮಾಡುತ್ತಿದ್ದ ಸಮದರ್ಭದಲ್ಲಿ ಅದನ್ನು ಗಮನಿಸಿದ ಖದೀಮರು ಆವರನ್ನು ಹಿಂಬಾಲಿಸಿ ಹಣ ದೋಚುವ ಉಪಾಯ ಮಾಡಿದ್ದರು ಎಂದು ಹೇಳಲಾಗಿದೆ.
ಕಳ್ಳರ ಚಲನವಲನಗಳ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.