ಮಂಗಳೂರು, ಮಾ 8 (Daijiworld News/MSP): ವಿಶ್ವದಾದ್ಯಂತ ಕೊರೋನಾ ಸೋಂಕಿಗೆ ಸಾವಿರಾರು ಜನರು ಪ್ರಾಣ ಕಳೆದುಕೊಂಡಿರುವ ಭಾರತದ ವಿವಿಧೆಡೆಯೂ ಕೊರೊನಾ ವೈರಸ್ ಪತ್ತೆಯಾಗುತ್ತಿರುವ ಬೆನ್ನಲ್ಲೇ ಇದೀಗ ಹಕ್ಕಿ ಜ್ವರದ ಭೀತಿ ಎದುರಾಗಿದೆ . ಕೇರಳದ ಪಶ್ಚಿಮ ಕೊಡಿಯಾಥುರ್ನ ಒಂದು ಕೋಳಿ ಫಾರ್ಮ್ ಮತ್ತು ಕೋಯಿಕ್ಕೋಡ್ನ ವೆಂಗೇರಿಯಲ್ಲಿನ ಖಾಸಗಿ ನರ್ಸರಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ದೃಢಪಟ್ಟಿದೆ. 2016ರ ನಂತರ ಕೇರಳ ರಾಜ್ಯದಲ್ಲಿ ಏಕಾಏಕಿ ಕಾಣಿಸಿಕೊಂಡಿರುವ ಮೊದಲ ಹಕ್ಕಿಜ್ವರ ಪ್ರಕರಣ ಇದಾಗಿದೆ. ಪ್ರತಿದಿನ ಇನ್ನೂರು ಕೋಳಿಗಳು ಸಾಯಲು ಪ್ರಾರಂಭಿಸಿದಾಗ ಹಕ್ಕಿಜ್ವರದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ವರದಿಗಳ ಪ್ರಕಾರ ಕೋಳಿಗಳಲ್ಲಿ ಹಕ್ಕಿಜ್ವರವಿರುವುದು ಭೋಪಾಲ್ ಪ್ರಯೋಗಾಲಯದಿಂದ ದೃಢಪಟ್ಟಿದೆ.
ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಹಕ್ಕಿಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಹಕ್ಕಿಜ್ವರ ಮನುಷ್ಯರನ್ನು ಕಾಡುವುದು ಅಪರೂಪ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಹಕ್ಕಿಗಳ ತ್ಯಾಜ್ಯಗಳು ಸೋಕದಂತೆ ಎಚ್ಚರಿಕೆ ವಹಿಸಬೇಕು ಎಂದು ದ.ಕ. ಜಿಲ್ಲಾ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಹಕ್ಕಿಯ ತ್ಯಾಜ್ಯ ಮನುಷ್ಯನ ಸಂಪರ್ಕಕ್ಕೆ ಬಂದರೆ ಅದರಿಂದ ವೈರಾಣು ಮನುಷ್ಯನ ದೇಹಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಸೋಂಕು ಪೀಡಿತ ಹಕ್ಕಿಗಳ ಮೂಗಿನ ಸ್ರಾವ, ಬಾಯಿ ಅಥವಾ ಕಣ್ಣಿನಿಂದ ಸ್ರವಿಸುವ ದ್ರವದ ಮೂಲಕವೂ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕೋಳಿ ಫಾರಂನಲ್ಲಿ ಕೆಲಸ ಮಾಡುವವರು, ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರು, ಹಕ್ಕಿತ್ಯಾಜ್ಯವಿರುವ ಕೆರೆಗಳಲ್ಲಿ ಈಜಾಡುವುದರಿಂದ ಇದು ಬರುವ ಸಾಧ್ಯತೆ ಇದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಇಂಥವುಗಳಿಂದ ದೂರವಿರಬೇಕು. ಹಕ್ಕಿಜ್ವರ ಕಾಣಿಸಿಕೊಂಡರೆ ಮೂರು ದಿನದ ಬಳಿಕ ಜ್ವರ ಜಾಸ್ತಿಯಾಗುತ್ತದೆ ಜೊತೆಗೆ ಕೆಮ್ಮು ಗಂಟಲುನೋವು, ತಲೆನೋವು ಕೂಡಾ ಕಾಡತೊಡಗುತ್ತದೆ.