ಕಾಸರಗೋಡು, ಫೆ 16: ಪ್ರಯಾಣ ದರ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇರಳದಲ್ಲಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಖಾಸಗಿ ಬಸ್ಸು ಮುಷ್ಕರವು ಜನಸಾಮಾನ್ಯರ ಮೇಲೆ ಪರಿಣಾಮ ಬೀರತೊಡಗಿದೆ.
ಇದೀಗ ಗ್ರಾಮೀಣ ಪ್ರದೇಶಕ್ಕೆ ಬಸ್ಸು ಮುಷ್ಕರದ ಬಿಸಿ ತಟ್ಟಿದ್ದು, ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ಸಮಸ್ಯೆಗೆ ಒಳಗಾಗಿದ್ದಾರೆ. ಕೆಲ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ದುಬಾರಿ ಹಣ ನೀಡಿ ಖಾಸಗಿ ವಾಹನಗಳನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಸಂಚಾರ ನಡೆಸುವುದರಿಂದ ಪ್ರಯಾಣಿಕರಿಗೆ ಅಲ್ಪ ಮಟ್ಟಿನ ಸಮಾಧಾನವಿದೆ.
ಖಾಸಗಿ ಬಸ್ ಪ್ರಯಾಣ ದರ ಮತ್ತು ವಿದ್ಯಾರ್ಥಿ ಪಾಸ್ ಗಳ ದರ ಏರಿಕೆ ಪ್ರಸ್ತಾಪವನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಖಾಸಗಿ ಬಸ್ ಮಾಲಕರ ಸಂಘ ಕರೆ ನೀಡಿದೆ.
ಕನಿಷ್ಟ ಪ್ರಯಾಣ ದರವನ್ನು 7 ರೂಪಾಯಿಗಳಿಂದ 8 ರೂಪಾಯಿಗೆ ಸರ್ಕಾರ ಹೆಚ್ಚಿಸಿದ್ದರೂ, ಇದು ಮಾಲಕರಿಗೆ ಸಮಾಧಾನ ತಂದಿಲ್ಲ. ಪದೇ ಪದೇ ಇಂಧನ ಬೆಲೆ ಮತ್ತು ತೆರಿಗೆ ದರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ದರ ನ್ಯಾಯ ಸಮ್ಮತವಲ್ಲ. ಕನಿಷ್ಠ ದರವನ್ನು 10 ರೂಪಾಯಿಗೆ ಹೆಚ್ಚಿಸುವವರೆಗೂ ಪ್ರತಿಭಟನೆ ಮುಂದುವರಿಸಲು ತೀರ್ಮಾನಿಸಿದೆ.