ಉಪ್ಪಿನಂಗಡಿ,ಮಾ.09(DaijiworldNews/PY) : ಕೆಎಸ್ಸಾರ್ಟಿಸಿ ಬಸ್ ಹಾಗೂ ಮಾರುತಿ ಸುಝುಕಿ ಸ್ವಿಫ್ಟ್ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಮೃತನನ್ನು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರ ದಯೇಶ್ ಎಂದು ಗುರುತಿಸಲಾಗಿದೆ. ಕಡಬದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಕಡಬ ಕಡೆಗೆ ಆಗಮಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಡುವೆ ಉಪ್ಪಿನಂಗಡಿಯ ಸಿಟಿಲ್ಯಾಂಡ್ ಹೊಟೇಲ್ ಮುಂಭಾಗದಲ್ಲಿ ಅಪಘಾತ ಸಂಭವಿಸಿದೆ.
ಪುತ್ತೂರಿನ ಗ್ಯಾಸ್ ವಿತರಣಾ ಏಜೆನ್ಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಯೇಶ್ ಭಾನುವಾರದಂದು ರಜೆ ಇದ್ದ ಹಿನ್ನೆಲೆಯಲ್ಲಿ ಸೋಮವಾರ ಕರ್ತವ್ಯ ನಿರ್ವಹಿಸಲೆಂದು ತನ್ನ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ದಯೇಶ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ.