ಮಂಗಳೂರು, ಮಾ.09 (DaijiworldNews/PY) : ಮಾರಣಾಂತಿಕ ಕೊರೊನ ಸೋಂಕು ವಿಶ್ವಾದಾದ್ಯಂತ ಲಕ್ಷಾಂತರ ಜನರಿಗೆ ತಗುಲಿ ಸಾವಿರಾರು ನಾಗರಿಕರ ಮಾರಣಹೋಮಕ್ಕೆ ಕಾರಣವಾಗಿದೆ. ಈ ನಡುವೆ ಮಂಗಳೂರಿನಲ್ಲಿ ಪ್ರಯಾಣಿಕರೊಬ್ಬರಿಗೆ ಕೊರೊನ ಸೋಂಕು ತಗುಲಿದ ಶಂಕೆ ಹಿನ್ನೆಲೆಯಲ್ಲಿ ನಗರದ ಭಾನುವಾರ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಿಸಿರುವ ವ್ಯಕ್ತಿಯ ಹೆಸರನ್ನು ಆರೋಗ್ಯಾಧಿಕಾರಿಗಳು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ದುಬೈನಿಂದ ಆಗಮಿಸಿದ ಪ್ರಯಾಣಿಕನಲ್ಲಿ ಜ್ವರದ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ವೆನ್ಲಾಕ್ ಆಸ್ಪತ್ರೆಯ ವಿಶೇಷ ಘಟಕಕ್ಕೆ ದಾಖಲಿಸಲಾಗಿದೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಸಿಖಂದರ್ ಪಾಶ, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಲ್ಲಿ ಜ್ವರದ ಲಕ್ಷಣ ಇರುವುದು ಪತ್ತೆಯಾಗಿದೆ. ದುಬೈ ವಿಮಾನ ನಿಲ್ದಾಣದಿಂದ ತೆರಳುತ್ತಿದ್ದ ಸಂದರ್ಭದಲ್ಲಿ ನಡೆದ ತಪಾಸಣೆ ವೇಳೆ ಆತನಲ್ಲಿ ಯಾವುದೇ ಜ್ವರ ಲಕ್ಷಣ ಕಂಡುಬಂದಿಲ್ಲ ಎಂಬ ಮಾಹಿತಿ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ಪ್ರತ್ಯೇಕ ವಾರ್ಡ್ನಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಯಾಣಿಕನಿಂದ ಗಂಟಲಿನ ದ್ರವರೂಪದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಸ್ಯಾಂಪಲ್ ಅನ್ನು ಬೆಂಗಳೂರು ವೈದ್ಯಕೀಯ ಆಸ್ಪತ್ರೆಗೆ (ಬಿಎಂಸಿ) ರವಾನಿಸಲಾಗಿದೆ. ಸೋಮವಾರದ ವೇಳೆಗೆ ವರದಿ ಲಭ್ಯವಾಗಲಿದೆ. ಒಂದು ವೇಳೆ ವರದಿಯಲ್ಲಿ ಸೋಂಕು ಇಲ್ಲವೆಂದು ದೃಢಪಟ್ಟಲ್ಲಿ ಸಂಪೂರ್ಣ ತಪಾಸಣೆ ಬಳಿಕ ಪ್ರಯಾಣಿಕನನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನೋ ಆ್ಯಂಬುಲೆನ್ಸ್! : ಸೋಂಕು ಶಂಕಿತ ಪ್ರಯಾಣಿಕನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆತರಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಯಾವುದೇ ಆ್ಯಂಬುಲೆನ್ಸ್ ಇರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ನಂತರ ಆಸ್ಪತ್ರೆಯ ಆ್ಯಂಬುಲೆನ್ಸ್ ಅನ್ನು ನಿಲ್ದಾಣಕ್ಕೆ ರವಾನಿಸಿ ಪ್ರಯಾಣಿಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.
ತಪಾಸಣೆ ಕಡ್ಡಾಯ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರನ್ನೂ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಪ್ರಕಾರ ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಎಲ್ಲ ಪ್ರಯಾಣಿಕರಿಗೂ ಈ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ನಿಲ್ದಾಣದ ನಿರ್ದೇಶಕ ವಿ.ವಿ.ರಾವ್ ತಿಳಿಸಿದ್ದಾರೆ.