ಮಂಗಳೂರು, ಮಾ 9 (Daijiworld News/MSP): ದುಬೈನಿಂದ ಭಾನುವಾರ ಬಂದಿಳಿದಿದ್ದ, ಕೊರೊನಾ ಶಂಕೆಯ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಉಳ್ಳಾಲದ ನಿವಾಸಿ ಆಸ್ಪತ್ರೆಯಿಂದಲೇ ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ.
ದುಬೈನಿಂದ ಬಂದಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ವೇಳೆ ವ್ಯಕ್ತಿಯಲ್ಲಿ ಜ್ವರದ ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಭಾನುವಾರ ರಾತ್ರಿ ನಗರದ ವೆನ್ಲ್ಯಾಕ್ ಆಸ್ಪತ್ರೆ್ಯ ವಿಶೇಷ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ವ್ಯಕ್ತಿಯನ್ನು ಕಳುಹಿಸಿಕೊಡುವಂತೆ ಸಂಬಂಧಿಕರು ಗಲಾಟೆ ಮಾಡಿದ್ದರು. ಮಾತ್ರವಲ್ಲದೆ ತಾವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ತಿಳಿಸಿದ್ದರು.
ಈ ನಡುವೆ ಆತ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಆಸ್ಪತ್ರೆಯ ವೈದ್ಯಾಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇನ್ನು ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿಕಂದರ್ ಪಾಷಾ, 'ಜ್ವರ ಇದ್ದ ಕಾರಣ ಆತನನ್ನು ನಿಗಾದಲ್ಲಿ ಇರಿಸಲಾಗಿತ್ತು. ಆತನ ವಿಳಾಸಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. ಪತ್ತೆಗಾಗಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ' ಎಂದರು. ಪೊಲೀಸರ ನೆರವಿನಲ್ಲಿ ಆತನನ್ನು ವಶಕ್ಕೆ ಪಡೆಯಲಾಗುವುದು. ರಕ್ತ ಮತ್ತು ಇತರ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಲಾಗುವುದು ಎಂದರು.