ಮಂಗಳೂರು, ಮಾ. 09 (Daijiworld News/MB) : ದುಬೈಯಿಂದ ಆಗಮಿಸಿದ್ದ ಜ್ವರಬಾಧಿತ ವ್ಯಕ್ತಿಯನನ್ನು ಕೊರೊನಾ ಶಂಕೆಯಿಂದ ಭಾನುವಾರ ವೆನ್ಲಾಕ್ ಆಸ್ಪತ್ರೆಯ ವಿಶೇಷ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಪರೀಕ್ಷೆ ನಡೆಸಲು ಆತನ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜೇಶ್ವರಿದೇವಿ ತಿಳಿಸಿದ್ದಾರೆ.
ಜ್ವರಬಾಧಿತ ವ್ಯಕ್ತಿಯು ರಕ್ತ ಮತ್ತು ಗಂಟಲಿನ ದ್ರವದ ಮಾದರಿ ಸಂಗ್ರಹಿಸಲು ಅವಕಾಶ ನೀಡಿಲ್ಲ. ಆತ ತಪಾಸಣೆಗೆ ಒಳಪಡುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಾಗೆಯೇ ತಾನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ಬದಲಾಗಿ ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ದುಬೈನಿಂದ ಬಂದಿದ್ದ ಆ ವ್ಯಕ್ತಿಯಲ್ಲಿ ಜ್ವರದ ಲಕ್ಷಣಗಳು ಮಾತ್ರ ಕಂಡುಬಂದಿತ್ತು ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಯಿಂದ ಪರಾರಿಯಾಗಿರುವ ಕೊರೊನಾ ಶಂಕಿತನನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಸರ್ವೇಕ್ಷಣಾಧಿಕಾರಿಗಳು ಹುಡುಕಾಡುತ್ತಿದ್ದು ಆತ ಈವರೆಗೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದು ಭಾನುವಾರ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ದುಬೈನಿಂದ ಬಂದಿದ್ದ ವ್ಯಕ್ತಿಯಲ್ಲಿ ಜ್ವರದ ಲಕ್ಷಣಗಳು ಕಂಡು ಬಂದಿದ್ದು ಮುನ್ನೆಚ್ಚರಿಕೆಯ ಕ್ರಮವಾಗಿ ಆತನನ್ನು ವೆನ್ಲಾಕ್ ಆಸ್ಪತ್ರೆಯ ವಿಶೇಷ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಆತ ಭಾನುವಾರ ತಡ ರಾತ್ರಿಯೇ ಆಸ್ಪತ್ರೆಯಿಂದ ಪರಾರಿಯಾಗಿದ್ದ.