ಮಂಗಳೂರು, ಮಾ.09 (DaijiworldNews/PY) : ಡಿ.19ರಂದು ನಗರದಲ್ಲಿ ನಡೆದ ಗಲಭೆ ಹಾಗೂ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಹಾಜರಾದ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಗ್ಷು ಗಿರಿ ಅವರು ವಿಚಾರಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ 38 ದಾಖಲೆಗಳನ್ನು ಸಲ್ಲಿಸಿದರು.
ವಿಚಾರಣೆಯು ಹಂಪನಕಟ್ಟೆಯ್ಲಲಿರುವ ಮಿನಿ ವಿಧಾನಸೌಧದ ಉಪ ವಿಭಾಗಾಧಿಕಾರಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆಯಿತು. ಐಪಿಎಸ್ ಅಧಿಕಾರಿ ಅರುಣಾಂಗ್ಷು ಗಿರಿ ಅವರು ವಿಚಾರಣಾಧಿಕಾರಿ ಎದುರು ಹಾಜರಾಗಿದ್ದು, ಲಿಖಿತ ಹೇಳಿಕೆ ಹಾಗೂ ದಾಖಲೆಗಳನ್ನು ಸಲ್ಲಿಸಿದರು.
ನಾನು ಡಿ.19ರಂದು ಪೊಲೀಸ್ ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದೆ. ಅನುಮತಿ ಇಲ್ಲದೆ ಪ್ರತಿಭಟನೆಗೆ ಪತ್ನಿಸಿದ ಜನರನ್ನು ನಿಂಯಂತ್ರಿಸುತ್ತಿದ್ದೆವು. ಪ್ರತಿಭಟನೆಗೆ ಸೇರಿದ ಜನರು ಗಲಭೆಗೆ ಇಳಿದರು. ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು. ಇದರಿಂದಾಗಿ 78 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಾಯಗೊಂಡರು. ಪ್ರತಿಭಟನೆ ನಿಯಂತ್ರಿಸಲು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ಅವರೂ ವಿಚಾರಣಾಧಿಕಾರಿ ಎದುರು ಹಾಜರಾಗಿ ಘಟನೆಗೆ ಸಂಬಂಧಿಸಿದಂತೆ ಲಿಖಿತ ಹೇಳಿಕೆ ನೀಡಿದರು.
ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ ಕೆಎಸ್ಎಸ್ಎಫ್) ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು. ಪ್ರತಿಭಟನೆಯನ್ನು ಪೊಲೀಸರು ಅನುಮತಿ ನಿರಾಕರಿಸಿದ ನಂತರ ವಾಪಾಸ್ ಪಡೆಯಲಾಗಿತ್ತು. ಸಾರ್ವಜನಿಕರಿಗೆ ಈ ಸಂಬಂಧ ಮಾಹಿತಿಯನ್ನೂ ನೀಡಲಾಗಿತ್ತು. ನಮಗೂ ಹಾಗೂ ಡಿ.19ರ ಗಲಭೆಗೂ ಯಾವುದೇ ಸಂಬಂಧವಿಲ್ಲ ಎಂದು ಖಾಝಿ ಅವರ ಹೇಳಿಕೆಯಲ್ಲಿ ತಿಳಿದಿದೆ.
ನನ್ನನ್ನು ಗಲಭೆಯ ಬಳಿಕ ಕೆಲವರು ದ್ವೇಷಿಸುತ್ತಿದ್ದರು. ನನ್ನ ಕೊಲೆಗೂ ಯತ್ನಗಳು ನಡೆದಿವೆ. ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ವಿಚಾರಣಾಧಿಕಾರಿ ಎದುರು ಹೇಳಿಕೆ ನೀಡಿದ್ಧಾರೆ ಎಂಬ ಮಾಹಿತಿ ದೊರೆತಿದೆ.
ವಿಚಾರಣಾ ಕಲಾಪ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಜಗದೀಶ್ ಅವರು, 30 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಚಾರಣೆಗೆ ಹಾಜರಾಗಿದ್ದರು. ಮಾ.12ರಂದು ಮತ್ತೆ ವಿಚಾರಣೆ ನಡೆಯಲಿದೆ. ಆ ದಿನ ಪೊಲೀಸ್ ಕಮಿಷನರ್ ಸೇರಿದಂತೆ ಹಲವರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ಧಾರೆ.