ವಿಟ್ಲ, ಮಾ 09(DaijiworldNews/SM): ಮಂಗಳೂರು ವಿಮಾನ ನಿಲ್ದಾಣದಿಂದ ವೆಲ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದ ಕೊರೊನಾ ಶಂಕಿತ ವ್ಯಕ್ತಿಯೊಬ್ಬ ವಿಟ್ಲದ ಪಳಿಕೆ ಸಮೀಪದ ರಂಗರಮಜಲು ಎಂಬಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದ್ದು, ಸೋಮವಾರ ರಾತ್ರಿ ಆರೋಗ್ಯ ಇಲಾಖೆ ಹಾಗೂ ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕಾಗಮಿಸಿ ಬಂಟ್ವಾಳ ಆಸ್ಪತ್ರೆಗೆ ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದುಬೈನಿಂದ ಆಗಮಿಸಿದ ಉಳ್ಳಾಲ ಮೂಲದ ವ್ಯಕ್ತಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ನಡೆಸಿ ಜ್ವರದ ಹಿನ್ನಲೆಯಲ್ಲಿ ಕೊರೊನಾ ಶಂಕೆಯ ಹಿನ್ನೆಲೆಯಲ್ಲಿ ಮಂಗಳೂರು ವೆಲ್ಲಾಕ್ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು. ಸೋಮವಾರ ಬೆಳಗ್ಗಿನ ಜಾವ ಅಲ್ಲಿಂದ ಹೊರ ಬಂದ ವ್ಯಕ್ತಿ ಮಧ್ಯಾಹ್ನದ ಸಮಯ ಬಂಟ್ವಾಳ ತಾಲೂಕು ವಿಟ್ಲದ ಪಳಿಕೆ ರಂಗರಮಜಲು ಎಂಬಲ್ಲಿರುವ ಪತ್ನಿಯ ಮನೆಗೆ ಆಗಮಿಸಿದ್ದರು. ಇದು ಸ್ಥಳೀಯರಲ್ಲಿ ಆತಂಕ ಮೂಡಿಸುವಂತೆ ಮಾಡಿತು.
ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ಎಸ್. ಕೆ. ತೆರಳಿ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ಕೊಟ್ಟಿದ್ದು, ಸ್ಥಳದಲ್ಲಿ ಸಿಬ್ಬಂದಿ ಹೇಮಾ ಅವರನ್ನು ನಿಯೋಜಿಸಿದ್ದರು. ಬಂಟ್ವಾಳ ದಂಡಾಧಿಕಾರಿಗಳಾದ ರಶ್ಮಿ ಎಸ್. ಆರ್., ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಂಡರು.
ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಪಾಸಿಟಿವ್ ಫಲಿತಾಂಶ ಬಂದಿತ್ತು ಎನ್ನಲಾಗಿದೆ. ಇದುವೇ ಈ ಘಟನೆಗೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಮಂಗಳೂರಿನಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದು, ಜನರಲ್ಲಿ ಆತಂಕ ದೂರ ಮಾಡಿದ್ದಾರೆ. ಇದೀಗ ಪತ್ತೆಯಾದ ವ್ಯಕ್ತಿಯ ಹೆಚ್ಚಿನ ತಪಾಸಣೆ ಬಳಿಕ ನೈಜಾಂಶ ಹೊರಬೀಳಲಿದೆ.