ಮಂಗಳೂರು, ಮಾ 09(DaijiworldNews/SM): ಪತ್ರಕರ್ತ ಹಾಗೂ ಸ್ಯಾಕ್ಸೋಫೋನ್ ವಾದಕ ದಯಾನಂದ ಕುಡುಪು(55) ಸೋಮವಾರ ಸಂಜೆ ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಪತ್ರಿಕೆಯೊಂದರಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ವಾರದ ಹಿಂದೆ ಅಸ್ವಸ್ಥರಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕನ್ನಡದ ಹಲವು ಪತ್ರಿಕೆಗಳಲ್ಲಿ ಅವರು ತಮ್ಮ ಸೇವೆ ಸಲ್ಲಿಸಿದ್ದಾರೆ.
ಉತ್ತಮ ಸ್ಯಾಕ್ಸೋಫೋನ್ ವಾದಕರಾಗಿದ್ದ ಅವರು ಮಂಗಳೂರು ಪ್ರೆಸ್ಕ್ಲಬ್ ದಿನಾಚರಣೆ, ದ.ಕ.ಜಿಲ್ಲಾ ಪತ್ರಕರ್ತರ ಸಮ್ಮೇಳನ ಸೇರಿದಂತೆ, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಹಲವು ಕಾರ್ಯಕ್ರಮಗಳಲ್ಲಿ ತನ್ನ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.