ಮಂಗಳೂರು, ಮಾ 10 (Daijiworld News/MSP): ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಪೋಟಕವಿರಿಸಿದ್ದ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಆದಿತ್ಯರಾವ್ ಗುರುತು ದೃಢೀಕರಣಕ್ಕಾಗಿ ಸಾಕ್ಷಿಗಳ ಮುಂದೆ ಪರೇಡ್ ನಡೆಸಲಿದ್ದಾರೆ. ಮಂಗಳವಾರ ಬೆಳಗ್ಗೆ 10:30ಕ್ಕೆ ಆರೋಪಿ ಆದಿತ್ಯರಾವ್ನ ಪರೇಡ್ ನಡೆಯಲಿದೆ ಎಂದು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ತಿಳಿಸಿದ್ದಾರೆ.
ಇನ್ನು, ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಸುಮಾರು 50ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದೆ. ಇವರ ಮುಂದೆ ಆದಿತ್ಯತರಾವ್ ಪರೇಡ್ ನಡೆಯಲಿದೆ. ಈ ಹಿಂದೆಯೇ ಗುರುತು ಪತ್ತೆಗಾಗಿ ಪರೇಡ್ ನಡೆಸಲು ಕ್ರಮ ಕೈಗೊಳ್ಳುವಂತೆ ಬೆಳ್ಳಿಯಪ್ಪ ಮಂಗಳೂರು ತಹಶೀಲ್ದಾರ್ಗೆ ಪತ್ರ ಬರೆದಿದ್ದರು. ಅದರಂತೆಯೇ ಈಗ ಆದಿತ್ಯರಾವ್ನ ಪರೇಡ್ ನಡೆಸಲಾಗವುದು ಎನ್ನಲಾಗುತ್ತಿದೆ.
ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದವ ಅದಿತ್ಯ ರಾವ್ ಮಲೇರಿಯಾದಿಂದ ಬಳಲುತ್ತಿದ್ದ ಕಾರಣ ಫೆ. 25ರಂದು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನ ಅನಾರೋಗ್ಯ ಕಾರಣಕ್ಕೆ ಅಂದು ನಡೆಯಬೇಕಾಗಿದ್ದ ಗುರುತು ಪತ್ತೆ ಪೆರೇಡ್ ಮುಂದೂಡಲಾಗಿತ್ತು, ಜನವರಿ 20ರಂದು ಆದಿತ್ಯ ರಾವ್ ವಿಮಾನ ನಿಲ್ದಾಣಕ್ಕೆ ಸ್ಫೋಟಕ ಇರಿಸಲು ತೆರಳಿದ್ದು ಹಾಗೂ ಅಲ್ಲಿಂದ ವಾಪಸ್ ತರಲಿರುವ ನೋಡಿದ ಸುಮಾರು 15 ಮಂದಿಯನ್ನು ಗುರುತುಪತ್ತೆ ಪೆರೇಡ್ ಗೆ ಆಹ್ವಾನಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿಗಳು ತಿಳಿಸಿದ್ದಾರೆ.