ಕಾರ್ಕಳ, ಮಾ 10 (Daijiworld News/MSP): ಕೊರೊನಾ ವೈರಸ್ ನಿಂದ ಜಗತ್ತೇ ತಲ್ಲಣವಾಗಿದ್ದು, ಭಾರತದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಇಂದು ಮತ್ತೆ ಹೊಸ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಕೊರೊನಾ ಎಂದರೆ ಜನರೆಲ್ಲರೂ ಬೆಚ್ಚಿಬೀಳುವಂತಾಗಿದೆ. ಈ ವೈರಸ್ ತಡೆಗಟ್ಟಲು ಇಡೀ ವಿಶ್ವವೇ ಪ್ರಯತ್ನಿಸುತ್ತಿದೆ.
ಇದೀಗ ಕೊರೊನಾ ವೈರಸ್ ಯಕ್ಷಗಾನಕ್ಕೂ ತಲುಪಿದೆ. ಉಡುಪಿಯ ಕಾರ್ಕಳದ ಪಳ್ಳಿ ಗ್ರಾಮದಲ್ಲಿ ನಡೆದ ತುಳು ಯಕ್ಷಗಾನದಲ್ಲೂ ಕೊರೊನಾ ಬಗ್ಗೆ ಪಾತ್ರಧಾರಿ ಉಲ್ಲೇಖಿಸಿದ್ದಾರೆ. ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ವತಿಯಿಂದ ನಡೆದ "ರಂಗನಾಯಕಿ" ಯಕ್ಷಗಾನ ಸಾಮಾಜಿಕ ಪ್ರಸಂಗ ಆಗಿರುವುದರಿಂದ ಪಾತ್ರಗಳಿಗೆ ಮುಕ್ತವಾದ ಅವಕಾಶ ಇರುತ್ತದೆ. ಹೀಗಾಗಿ ಪಾತ್ರಧಾರಿ ಕೊರೊನಾ ವೈರಸ್ ಮಾತು ಆರಂಭಿಸಿದ್ದಾರೆ.
ಪ್ರಸಂಗದ ಹಾಸ್ಯ ಪಾತ್ರದಾರಿ ಪ್ರಸನ್ನ ಶೆಟ್ಟಿ ಬೈಲೂರು ಅವರು ಹಾಸ್ಯಗಾರನಾಗಿ ಪ್ರವೇಶಿಸುವಾಗ ಮಾಸ್ಕ್ ನಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪ್ರವೇಶ ಮಾಡಿದ್ದಾರೆ. ಈ ವೇಳೆ ಹಾಸ್ಯ ಮಯವಾಗಿಯೇ ಕೊರೊನಾ ಬಗ್ಗೆ ಮಾತನಾಡಿದ್ದಾರೆ.
ರಂಗ ಪ್ರವೇಶಿದ ಪಾತ್ರಧಾರಿ ಭಾಗವತರಿಗೆ ಕೆಮ್ಮು, ಶೀತ ಇದೆಯೇ ಎಂದು ಕೇಳಿ ಪಾತ್ರಧಾರಿ ಈಗೆಲ್ಲಾ ಮುಖಕ್ಕೆ ಮುಖಗವಸು ಧರಿಸದೆ ಎಲ್ಲೂ ಹೋಗುವಂತಿಲ್ಲ ಎಂದು ಎಚ್ಚರಿಸಿದ್ದಾರೆ. "ಕೊರೊನಾ ವೈರಸ್ " ಇಂಗ್ಲಿಷ್ ಶಬ್ದವಾದ ಕಾರಣ, ಯಕ್ಷಗಾನದಲ್ಲಿ ಈ ಶಬ್ದ ಬಳಕೆಗೆ ಅವಕಾಶವಿಲ್ಲ ಇದಕ್ಕಾಗಿ ಕೊರಂಬು ಬೈರಾಸ್ ಎಂದು ಹಾಸ್ಯದ ಧಾಟಿಯಲ್ಲಿ ಈ ವೈರಸ್ ಬಗ್ಗೆ ಎಚ್ಚರಿಕೆ ಮೂಡಿಸಿದ್ದಾರೆ. ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಈ ಹಾಸ್ಯ ಜಾಗೃತಿಗೆ ಕೈ ಜೋಡಿಸಿದರು.