ಬಂಟ್ವಾಳ, ಮಾ 10 (Daijiworld News/MSP): ರಾಜಕೀಯ ಕ್ಷೇತ್ರದಲ್ಲಿ ವಾಮಚಾರ ನಡೆಯುವುದು ಇದೇ ಮೊದಲಲ್ಲ, ಆದರೆ ದ.ಕ.ಜಿಲ್ಲೆಯಲ್ಲಿ ಮಾತ್ರ ಬಲು ಅಪರೂಪ. ಆದರೆ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಇಂತಹದೊಂದು ಘಟನೆ ನಡೆದಿದೆ ಎಂಬುದು ಈಗ ಸುದ್ದಿಯಲ್ಲಿರುವ ಸಂಗತಿ
ಸಹಕಾರಿ ಬ್ಯಾಂಕ್ ನಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಸಹಕಾರಿ ಸಂಘದ ಕಚೇರಿಯ ಆವರಣದಲ್ಲಿ ವಾಮಚಾರ ಮಾಡಿದ್ದೇವೆ ತಪ್ಪಾಯಿತು ಮುಂದೆ ಇಂತಹ ಯಾವುದೇ ರೀತಿಯ ತಪ್ಪು ನಡೆಯುದಿಲ್ಲ ಎಂದು ತಪ್ಪೊಪ್ಪಿಕೊಂಡ ಘಟನೆ ಇಂದು ಸರಪಾಡಿ ಸೇವಾ ಸಹಕಾರಿ ಸಂಘ ದಲ್ಲಿ ನಡೆದಿದೆ.
ಇಲ್ಲಿನ ಗ್ರಾ.ಪಂ.ಸದಸ್ಯ ಆದಂ ಕುಂಜ್ಞಿ ಎಂಬವರು ಮತ್ತು ಮಂತ್ರವಾದಿ ಉಮೇಶ್ ಶೆಟ್ಟಿ ಎಂಬ ಇಬ್ಬರು ಸೇರಿ ವಾಮಚಾರ ನಡೆಸಿದ್ದೇವೆ ತಪ್ಪಾಯಿತು ಎಂದು ಕ್ಷಮೆಯಾಚಿಸಿದ್ದಾರೆ. ಫೆ.19 ರಂದು ರಾತ್ರಿ 9.47 ನಿಮಿಷಕ್ಕೆ ಸಹಕಾರಿ ಸಂಘ ದ ಅವರಣ ಗೋಡೆಯ ಬಳಿ ಗಾಜಿನ ಬಾಟಲಿಯಲ್ಲಿ ತಂದು ಇರಿಸಲಾದ ವಿಡಿಯೋ ಸಹಕಾರಿ ಸಂಘದ ಸಿ.ಸಿ.ಕ್ಯಾಮರಾ ದಲ್ಲಿ ರೆಕಾರ್ಡ್ ಅಗಿತ್ತು.
ಗಾಜಿನ ಬಾಟಲಿಯೊಂದು ಸ್ಥಳೀಯ ವ್ಯಕ್ತಿಯೋರ್ವರಿಗೆ ಕಾಣಲು ಸಿಕ್ಕಿದ ಬಳಿಕ ಸಿ.ಸಿ.ಕ್ಯಾಮಾರದಲ್ಲಿ ವಾಮಚಾರ ಮಾಡಿದ ಬಗ್ಗೆ ಮಾ.7 ರಂದು ಇದು ಬೆಳಕಿಗೆ ಬಂದಿದೆ.
ಫೆ.23 ರಂದು ಈ ಸಹಕಾರಿ ಸಂಘದ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ವಿಜಯ ಸಾಧಿಸಿದ್ದರು.
ಅದರೆ ಈ ಸಹಕಾರಿ ಸಂಘದಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳು ವಿಜಯ ಸಾಧಿಸಲು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಆದಂ ಕುಂಜ್ಞಿ ಎಂಬವರು ಉಮೇಶ್ ಶೆಟ್ಟಿ ಎಂಬ ಮಂತ್ರವಾದಿ ಮೂಲಕ ವಾಮಚಾರ ಮಾಡಿರುವುದರ ಬಗ್ಗೆ ಮಂಗಳವಾರ ಬ್ಯಾಂಕ್ ನಲ್ಲಿ ಕರೆದ ವಿಶೇಷ ಸಭೆಯಲ್ಲಿ ಅಗಮಿಸಿ ತಪ್ಪಾಯ್ತು ಎಂದು ಕ್ಷಮೆ ಕೇಳಿದ ಬಗ್ಗೆ ವರದಿಯಾಗಿದೆ.