ಮಂಗಳೂರು, , ಮಾ. 11 (Daijiworld News/MB) : ನಗರದ ಮಾರ್ಗನ್ಸ್ಗೇಟ್ ಬಳಿ ರೈಲು ಹಳಿಯಲ್ಲಿ ಭಾನುವಾರ ತಡ ರಾತ್ರಿ ಪತ್ತೆಯಾದ ಶವ ಕೇರಳದ ಕೋಝಿಕ್ಕೋಡ್ ನಿವಾಸಿ ಸುಹಾಸ್ ಮುಕುಂದನ್ (32) ಅವರದ್ದು ಎಂದು ಆತನ ಕುಟುಂಬದವರು ಮಂಗಳವಾರ ಗುರುತಿಸಿದ್ದಾರೆ.
ಈ ಯುವಕ ಭಾನುವಾರ ರಾತ್ರಿ 11:30 ಕ್ಕೆ ನಗರದಿಂದ ಚೆನ್ನೈಗೆ ಹೊರಟ ವೆಸ್ಟ್ಕೋಸ್ಟ್ ಎಕ್ಸ್ಪ್ರೆಸ್ ರೈಲಿನೆಡೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಮಂಗಳವಾರ ಮಂಗಳೂರಿಗೆ ಆತನ ಕುಟುಂಬಸ್ಥರು ಬಂದು ಈ ಶವ ಆತನದ್ದು ಎಂದು ಗುರುತು ಹಚ್ಚಿದ್ದಾರೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.
ಸುಹಾಸ್ ಮುಕುಂದನ್ ಕೊಯಮತ್ತೂರಿನಲ್ಲಿ ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಓದಿದ್ದು ಪುಣೆಯಲ್ಲಿ ಉದ್ಯೋಗ ದೊರೆತಿತ್ತು. 3 ವರ್ಷಗಳ ಹಿಂದೆ ಅಪಘಾತದಿಂದ ಗಂಭಿರವಾಗಿ ಅವರು ಗಾಯಗೊಂಡಿದ್ದು ಈ ಹಿನ್ನಲೆಯಲ್ಲಿ ದೀರ್ಘ ಕಾಲ ರಜೆ ಮಾಡಿದ ಕಾರಣದಿಂದಾಗಿ ಅವರು ಕೆಲಸ ಕಳೆದುಕೊಂಡರು.
ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸುಹಾಸ್ ಮತ್ತೆ ಪುಣೆಗೆ ತೆರಳಿದ್ದು ಆದರೆ ಮತ್ತೆ ಅದೇ ಕೆಲಸ ದೊರೆಯಲಿಲ್ಲ. ಈ ಹಿನ್ನಲೆಯಲ್ಲಿ ತನ್ನೊಂದಿಗೆ ಇದ್ದ ಎಲ್ಲರೂ ಉತ್ತಮ ಕೆಲಸದಲ್ಲಿ ಇದ್ದಾರೆ. ಆದರೆ ನಾನು ಮಾತ್ರ ಹೀಗೆ ಎಂದು ಮಾನಸಿಕವಾಗಿ ನೊಂದಿದ್ದರು. ಈ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.