ಉಡುಪಿ, ಮಾ. 11 (Daijiworld News/MB) : ಬೇರೆ ಎಲ್ಲಾ ಕಡೆಗಳಲ್ಲಿ ಬಣ್ಣಗಳನ್ನು ಎರಚಿ ಹೋಳಿಯನ್ನು ಆಚರಿಸಿದರೆ ಕರಾವಳಿಯ ಮರಾಠಿ ನಾಯಕ ಮತ್ತು ಕುಡುಬಿ ಜನಾಂಗಗಳು ತಮ್ಮ ಬಗೆಬಗೆಯ ಉಡುಗೆ-ತೊಡುಗೆಯಿಂದಲೇ ಹೋಳಿ ಹಬ್ಬಕ್ಕೆ ಬಣ್ಣ ತುಂಬಿದ್ದು ವಿಭಿನ್ನ ರೀತಿಯಲ್ಲಿ ಹೋಳಿ ಆಚರಿಸಿದ್ದಾರೆ.
ಕರಾವಳಿಗೆ ಹಲವು ಜಾತಿ, ಜನಾಂಗದವರು ವಲಸೆ ಬಂದಿದ್ದು ತಮ್ಮ ತಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನು ಪಾಲಿಸಿದ್ದಾರೆ. ಹೀಗಾಗಿ ಕರಾವಳಿಯಲ್ಲಿ ವಿಭಿನ್ನ ಆರಾಧನೆ, ಆಚರಣೆಗಳ ನೆಲೆಯೂರಿದೆ.
ಉತ್ತರ ಭಾರತದಲ್ಲಿ ಬಣ್ಣಗಳನ್ನು ಎರಚಿ ಹೋಳಿ ಹಬ್ಬವನ್ನು ಆಚರಿಸಿದರೆ ಕರಾವಳಿಯಲ್ಲಿ ಮರಾಠಿ ನಾಯಕ ಸಮುದಾಯಕ್ಕೆ ಸೇರಿದ ಜನರು ಬಗೆಬಗೆಯ ಬಣ್ಣದ ಬಟ್ಟೆಗಳನ್ನು ತೊಟ್ಟು ಮನಬಿಚ್ಚಿ ಕುಣಿಯುತ್ತ ಹೋಳಿ ಆಚರಿಸುತ್ತಾರೆ. ಈ ಜನಾಂಗವು ಮಹಾರಾಷ್ಟ್ರದಿಂದ ಹೊರಟು ದಕ್ಷಿಣದ ಕಡೆಗೆ ವಲಸೆ ಬಂದಿದ್ದು ಇವರು ತಮ್ಮ ದಣಿವರಿಯದ ದುಡಿಮೆಯಿಂದಲೇ ಗುರುತಿಸಲ್ಪಡುವ ಶ್ರಮಜೀವಿಗಳು ಕೂಡಾ ಹೌದು.
ಈ ಮರಾಠಿ ನಾಯಕ ಸಮುದಾಯ ಕೃಷಿ, ಹೈನುಗಾರಿಕೆ, ತೋಟಗಳಿಂದ ತಮ್ಮ ಜೀವನ ಸಾಗಿಸುತ್ತಿದ್ದು ತಮ್ಮ ಕುಲದೇವಿಯಾದ ಮಹಾ ಮಾಯೆಯನ್ನು ಆರಾಧಿಸುತ್ತಾ ಬರುತ್ತಿದೆ. ಈ ಮಹಮಾಯಿಗೆ ಹಲವು ಸೇವೆಗಳನ್ನು ಈ ಸಮುದಾಯ ನೀಡುತ್ತಿದ್ದು ಆ ಸೇವೆಗಳಲ್ಲಿ ಹೋಳಿ ಹಬ್ಬದ ಕುಣಿತವೂ ಒಂದು. ಹೋಳಿಯ ಹುಣ್ಣಿಮೆಯ ಕೆಲ ದಿನಗಳ ಮೊದಲು ಈ ಮರಾಠಿ ನಾಯಕ ಸಮುದಾಯದ ಉತ್ಸಾಹಿ ಯುವಕರು ಮನೆಯಲ್ಲಿರುವ ಬಣ್ಣ ಬಣ್ಣದ ಬಟ್ಟೆಯನ್ನು ತೊಟ್ಟುಕೊಂಡು ತಮ್ಮ ಕುಲದೇವಿ ಮಮ್ಮಾಯಿ ದೇವಸ್ಥಾನಕ್ಕೆ ಬಂದು ಇಲ್ಲಿ ದೇವರಿಗೆ ಕಾಯಿಯನ್ನು ತೆಗೆದಿಟ್ಟು ಬಳಿಕ ಊರಿನ ಪ್ರಮುಖ ಮನೆಗಳಿಗೆ ತೆರಳುತ್ತಾರೆ . ಗುಮ್ಮಟೆ ಮತ್ತು ಜಾಗಟೆಯನ್ನು ಬಡಿಯುತ್ತಾ ಮಹಾಮಾಯಿ ದೇವಿಯ ಸ್ಥುತಿಯನ್ನು ಹಾಡುತ್ತಾರೆ. ನಂತರ ಹೋಳಿಯ ಹಾಡನ್ನು ಹಾಡುತ್ತಾ ಕುಣಿಯುತ್ತಾರೆ.
ಹೋಳಿ ಕುಣಿತದ ತಂಡ ಮನೆಯ ಮುಂದೆ ಬರುತ್ತಿದ್ದಂತೆ ಮನೆ ಯಜಮಾನರು ಈ ತಂಡಕ್ಕೆ ಬೆಲ್ಲ ನೀರು ನೀಡಿ ಉಪಚರಿಸುತ್ತಾರೆ. ಹಾಗೆಯೇ ಮನೆಯಲ್ಲಿ ವಿವಾಹವಾಗದ, ಮಗುವಾಗದವರು ಇದ್ದಲ್ಲಿ ಹೋಳಿ ತಂಡದ ಮುಖ್ಯಸ್ಥರಿಂದ ಪ್ರಾರ್ಥನೆ ಮಾಡಿಸುತ್ತಾರೆ. ಹೀಗೆ ಪ್ರಾರ್ಥನೆ ಮಾಡಿದ್ದರಿಂದ ಹಲವು ಜನರಿಗೆ ಈ ಪ್ರಾರ್ಥನೆಯ ಫಲ ಲಭಿಸಿದೆ ಎಂದು ಈ ನಂಬಿರುವ ಇವರಿಗೆ ಈ ಕಾರಣದಿಂದಾಗಿ ಹೋಳಿಯ ತಂಡಗಳು ಮನೆಗೆ ಬರುವುದೆಂದರೆ ಅದೃಷ್ಟವೇ ತಮ್ಮ ಮನೆ ಬಾಗಿಲಿಗೆ ಬಂದಂತೆ.
ಈ ಹೋಳಿ ತಂಡದಲ್ಲಿ ಸಾಮಾನ್ಯವಾಗಿ ಸುಮಾರು 20 ರಿಂದ 25 ಜನರು ಇದ್ದು ಸಂಜೆಯ ವೇಳೆಗೆ ಆರಂಭವಾಗುವ ಈ ಕುಣಿತ ಮದ್ಯರಾತ್ರಿಯವರೆಗೆ ಮುಂದುವರೆಯುತ್ತದೆ.
ಈ ಹೋಳಿ ಹಬ್ಬವು ಒಂದು ಧಾರ್ಮಿಕ ನಂಬಿಕೆ. ಕೆಲವರು ಈ ಹೋಳಿ ಹಬ್ಬವನ್ನು ಪ್ರಾಮಾಣಿಕವಾಗಿ ಆಚರಿಸಿದರೆ ಒಳ್ಳೆಯ ಪ್ರತಿಫಲ ಸಿಗುತ್ತದೆ ಎಂದು ನಂಬಿದ್ದಾರೆ. ಇದು ಅವರಿಗೆ ಶುಭ ಎಂದು ಅವರು ನಂಬುತ್ತಾರೆ. ಈ ಈ ಕಲಾವಿದರು ಆಯಾ ಪ್ರದೇಶಗಳ ಕೆಲವು ಭಾಗಗಳಲ್ಲಿ ನೃತ್ಯಗಳನ್ನು ಪ್ರದರ್ಶಿಸುತ್ತಾರೆ. ಬೆಲ್ಲ ಮತ್ತು ನೀರನ್ನು ನೀಡುವ ಮೂಲಕ ಗ್ರಾಮಸ್ಥರು ನೃತ್ಯ ಗುಂಪುಗಳನ್ನು ತಮ್ಮ ಮನೆಗಳಿಗೆ ಸ್ವಾಗತಿಸುತ್ತಾರೆ. ಸಾಮಾನ್ಯವಾಗಿ ಕೃತಜ್ಞತಾಪೂರ್ವಕವಾಗಿ ಉಡುಗೊರೆಗಳಾಗಿ ಅಕ್ಕಿ, ತೆಂಗಿನಕಾಯಿ ಅಥವಾ ಹಣ ನೀಡುತ್ತಾರೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ.