ಮಂಗಳೂರು, ಮಾ.11 (DaijiworldNews/PY) : ದುಬೈನಿಂದ ಬಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪರಾರಿಯಾಗಿದ್ದ ವ್ಯಕ್ತಿಯ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತನಲ್ಲಿ ಕೊರೊನಾ ವೈರಸ್ ದೃಢಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದ್ಧಾರೆ.
ಆತ ಪರಾರಿಯಾದ ನಂತರ ಅವರ ಕುಟುಂಬದವರಿಗೆ ಸೂಕ್ತ ತಿಳುವಳಿಕೆ ನೀಡಿ ಚಿಕಿತ್ಸೆ ನೀಡಲಾಗಿತ್ತು ಎಂದು ಅವರು ಹೇಳಿದ್ಧಾರೆ.
ದಕ್ಷಿಣ ಕನ್ನಡದಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕಂಡು ಬಂದಿಲ್ಲ. ವಿಮಾನ ನಿಲ್ದಾಣ, ಎನ್ಎಂಪಿಟಿಯಲ್ಲಿ ವಿದೇಶಿ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಂಬ್ಯಲೆನ್ಸ್ ನಿಲುಗಡೆ ಮಾಡಲಾಗುತ್ತಿದೆ. ವೆನ್ಲಾಕ್ ಸೇರಿದಂತೆ 6 ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ಧಾರೆ.
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸೂಕ್ತ ಸಿದ್ದತೆ ಮಾಡಿದೆ. ಜನರು ಆಂತಕಗೊಳ್ಳುವ ಅಗತ್ಯವಿಲ್ಲ. ಅಂತಾರಾಷ್ಟ್ರೀಯ ವಿಮಾನ ಹಾಗೂ ಎನ್ಎಂಪಿಟಿಯಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 10 ಜನರ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿದ್ದು ಏಳು ವರದಿ ನೆಗೆಟಿವ್ ಬಂದಿದೆ. ಇನ್ನೂ ಮೂರು ವರದಿ ಪರೀಕ್ಷಾ ಹಂತದಲ್ಲಿ ಇದೆ ಎಂದು ಹೇಳಿದ್ಧಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆಗೆಯಲಾಗಿದ್ದು, ಕಂಟ್ರೋಲ್ ರೂಮ್ ನಂಬರ್ 104/1077/0824-2442590 ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದ್ಧಾರೆ.