ಬಂಟ್ವಾಳ, 11 (DaijiworldNews/SM): ಬಂಟ್ವಾಳ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿಯನ್ನು ರಾಜ್ಯ ಸರಕಾರ ಕೊನೆಗೂ ಪ್ರಕಟಿಸಿ ಅದೇಶ ಹೊರಡಿಸಿದೆ. ಬಂಟ್ವಾಳ ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ. ಮಹಿಳೆ ಎಂದು ಮೀಸಲಾತಿ ಪ್ರಕಟಿಸಿದೆ.
ಕಳೆದ ಒಂದು ವರ್ಷದಿಂದ ಚುನಾವಣೆ ನಡೆದು ಆಡಳಿತವಿಲ್ಲದೆ ಅಧಿಕಾರಿಗಳೇ ಆಡಳಿತಾಧಿಕಾರಿಗಳಾಗಿ ಪುರಸಭೆ ಕಾರ್ಯನಿರ್ವಹಿಸುತಿತ್ತು. ಒಟ್ಟು 27 ಸ್ಥಾನಗಳ ಪೈಕಿ ಕಾಂಗ್ರೇಸ್ 12 ಬಿಜೆಪಿ 11 ಹಾಗೂ ನಿರ್ಣಾಯಕರಾಗಿ ಎಸ್.ಡಿ.ಪಿ.ಐ 4 ಸ್ಥಾನವನ್ನು ಪಡೆದಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಸ್ಥಾನಗಳು ಮಹಿಳೆಯರಿಗೆ ಮೀಸಲಾತಿ ಪ್ರಕಟಗೊಂಡಿದೆ. ಒಟ್ಟು 27 ಸ್ಥಾನಗಳ ಪೈಕಿ ಮೂರು ಪಕ್ಷಗಳಲ್ಲಿ ಒಟ್ಟು 12 ಮಹಿಳೆಯರಿದ್ದಾರೆ.
ಬಾರೀ ಕುತೂಹಲ:
ಒಟ್ಟು 27 ಸ್ಥಾನಗಳ ಪೈಕಿ ಕಾಂಗ್ರೇಸ್ 12 ಬಿಜೆಪಿ 11 ಹಾಗೂ ಎಸ್.ಡಿ.ಪಿ.ಐ. 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಯಾರು ಅಧಿಕಾರದ ಗದ್ದುಗೆ ಏರುತ್ತಾರೆ ಎಂಬ ಬಾರೀ ಕುತೂಹಲ ಮೂಡಿದೆ. ಯಾವ ಪಕ್ಷಕ್ಕೂ ಸ್ಪಷ್ಟವಾದ ಬಹುಮತ ಬರದ ಹಿನ್ನೆಲೆಯಲ್ಲಿ ಯಾರು ಯಾರ ಜೊತೆ ಕೈ ಜೋಡಿಸುತ್ತಾರೆ ಎಂಬುದೇ ಇಲ್ಲಿನ ಪ್ರಮುಖ ವಿಚಾರ. ಕಾಂಗ್ರೇಸ್ 12 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾದರೆ, ಬಿಜೆಪಿ 11 ಸ್ಥಾನವನ್ನು ಪಡೆದು ಎರಡನೇ ಸ್ಥಾನದಲ್ಲಿದೆ ಜೊತೆಗೆ ಸಂಸದ ಹಾಗೂ ಶಾಸಕರ ಮತ ಬಿಜೆಪಿ ಲಭ್ಯವಾಗಿರುವುದರಿಂದ 13 ಮತ ಸಿಗುತ್ತದೆ. ಆದರೆ ಎಸ್.ಡಿ.ಪಿ.ಐ ಯಾರ ಜೊತೆ ಸೇರುತ್ತಾರೆ ಎಂಬುದೇ ಇಲ್ಲಿನ ಕೌತುಕ. ಕಳೆದ ಪುರಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾವು ಯಾರ ಜೊತೆಯೂ ಹೊಂದಾಣಿಕೆ ಮಾಡುವುದಿಲ್ಲ , ಸ್ಪಷ್ಟವಾದ ಬಹುಮತ ಬರದೆ ಹೋದರೆ ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎಂದು ಹೇಳಿದ್ದರು. ಎಸ್ಡಿ.ಪಿ.ಐ. ಕೂಡಾ ನಾವು ಯಾರ ಜೊತೆ ಹೊಂದಾಣಿಕೆ ಮಾಡುವುದಿಲ್ಲ ಎಂಬ ಮಾತು ಹೇಳಿತ್ತು. ಈ ಎರಡು ಪಕ್ಷಗಳು ಅಂದು ಹೇಳಿದ ಮಾತನ್ನು ಉಳಿಸಿಕೊಂಡಿದ್ದೇ ಆದರೆ ಬಿಜೆಪಿ ಆಡಳಿತ ನಡೆಸುವುದರಲ್ಲಿ ಸಂದೇಹವಿಲ್ಲ. ಒಟ್ಟಾರೆಯಾಗಿ, ಯಾರ ನಡೆ ಯಾವ ಕಡೆಗೆ ಎಂಬುದೇ ಬಂಟ್ವಾಳ ಜನತೆಯ ಚಿತ್ತ.
ಅದ್ಯಕ್ಷ ಸ್ಥಾನ ಯಾರಿಗೆ: ಸಾಮಾನ್ಯ ಮಹಿಳೆ ಮೀಸಲಾತಿ ಪ್ರಕಟವಾದ್ದರಿಂದ 8 ಜನ ಮಹಿಳೆಯರಿಗೆ ಆಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿಲು ಅವಕಾಶವಿದೆ. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆ ಬಿಜೆಪಿಯಿಂದ ಮೀನಾಕ್ಷಿ ಗೌಡ, ಹಾಗೂ ಕಾಂಗ್ರೇಸ್ ನಿಂದ ಜೆಸಿಂತಾ ಅವರು ಇಬ್ಬರು ಮಾತ್ರ ಇರುವುದರಿಂದ ಯಾರಿಗೆ ಒಳಿಯುತ್ತದೆ ಎಂಬುದನ್ನು ಕಾದುನೋಡಬೇಕು.