ಉಡುಪಿ, ಮಾ 11 (DaijiworldNews/SM):ಕರಾವಳಿಯಲ್ಲಿ ಕಟ್ಟಡ ಕಾರ್ಮಿಕರು ಸಾಕಷ್ಟು ಮಂದಿ ಇದ್ದು, ದೈನಂದಿನ ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಮರಳಿನ ಅಲಭ್ಯತೆಯಿಂದ ಕಾರ್ಮಿಕರು ಈಗಾಗಲೇ ಹಲವು ರೀತಿಯಲ್ಲಿ ಸಮಸ್ಯೆ ಅನುಭವಿಸಿದ್ದಾರೆ. ಇದೀಗ ಅಲ್ಪ ಮಟ್ಟಿಗೆ ಸಮಸ್ಯೆ ಪರಿಹಾರಗೊಂಡಿದೆ. ಈ ನಡುವೆಯೇ ಮತ್ತೆ ಮರಳು ಸಮಸ್ಯೆ ಎದುರಾಗಿದ್ದು, ಕಾರ್ಮಿಕರಿಗೆ ಶಾಸಕ ರಘುಪತಿ ಭಟ್ ಧ್ವನಿಯಾಗಿದ್ದಾರೆ.
ಜಿಲ್ಲೆಯಲ್ಲಿ ಮರಳು ಸಮಸ್ಯೆಯ ವಿರುದ್ಧ ಹೋರಾಟ ನಡೆಸಿದ ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಮರಳು ದಿಬ್ಬವನ್ನು ತೆರವುಗೊಳಿಸಲು ಕೆ ಎಸ್ ಇ ಝಡ್, ಸಿಆರ್ ಝಡ್ ಸಮಿತಿಯಿಂದ ಬಾಕಿ ಇದ್ದ ನಿರ್ಣಯವನ್ನು ಪೂರ್ಣಗೊಳಿಸಿ ಕಾರ್ಯದರ್ಶಿಯವರು ನೀಡಿದ್ದಾರೆ. ಇನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಏಳು ಮಂದಿ ಸದಸ್ಯರ ಸಮಿತಿಯಲ್ಲಿ ಮಂಡಿಸಿ 171 ಜನ ಪರವಾನಗಿದಾರರಿಗೆ ಮರಳನ್ನು ನೀಡಿ ಮರಳು ವಿತರಣೆ ಆ್ಯಪ್ ಮೂಲಕ ಮಾಡಲು ಈ ನಿರ್ಣಯದಿಂದ ಅನುಕೂಲವಾಗಿದೆ.
ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಕೈಗೊಂಡ ನಿರ್ಧಾರದಂತೆ ಮತ್ತೆ ಮರಳು ದಿಬ್ಬವನ್ನು ತೆರವುಗೊಳಿಸುವ ಸಂಬಂಧ ಸೂಚನೆ ನೀಡಲಾಗಿದೆ. ಹೀಗಾಗಿ ಒಂದು ವಾರದ ಒಳಗೆ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮರಳುಗಾರಿಕೆ ಪ್ರಾರಂಭವಾಗಲಿದೆ ಎಂದು ಉಡುಪಿ ಶಾಸಕ ಕೆ ರಘುಪತಿ ಭಟ್ ಭರವಸೆ ವ್ಯಕ್ತಪಡಿಸಿದ್ದಾರೆ.