ಸುಪ್ರೀತಾ ಸಾಲ್ಯಾನ್, ಪಡು
ಈಕೆಗಿನ್ನು ಆರರ ವಯಸ್ಸು. ವಿಡಿಯೋಗೇಮ್, ಕಂಪ್ಯೂಟರ್ ಮುಂದೆ ಕೂತು ಆಟವಾಡಬೇಕಿದ್ದ ಎಳೆಯ ವಯಸ್ಸಿದು. ಆದರೆ ಈ ವಯಸ್ಸಿನಲ್ಲಿ ಈಕೆಯ ಕಣ್ಣಿಗೆ ಬಿದ್ದದ್ದು ಚದುರಂಗದ ಬಿಲ್ಲೆಗಳು. ಬಾಲ್ಯದಲ್ಲಿಯೇ ಚದುರಂಗದಾಟದಲ್ಲಿ ಅತೀವ ಒಲವು ಇಟ್ಟುಕೊಂಡಿದ್ದ ಈಕೆ ಚೆಸ್ನಲ್ಲಿ ಸಾಧನೆಯ ಶಿಖರವನ್ನೇರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಸೈ ಎನಿಸಿಕೊಂಡಿದ್ದಾಳೆ. ಚೆಸ್ ರಂಗದಲ್ಲಿ ಸದ್ದಿಲ್ಲದೇ ಸುದ್ದಿ ಮಾಡಿರುವ ಈ ಅದ್ಭುತ ಪ್ರತಿಭೆಯ ಹೆಸರು ಶ್ರೀಯಾನ ಎಸ್ ಮಲ್ಯ.
ಮಂಗಳೂರಿನ ಉರ್ವ ಸಮೀಪದ ಸಂದೀಪ್ ಮತ್ತು ನಂದಿನಿ ಎಸ್ ಮಲ್ಯ ದಂಪತಿಯ ಪುತ್ರಿಯಾದ ಶ್ರೀಯಾನ 3 ವರುಷ ವಯಸ್ಸಿನಲ್ಲಿಯೇ ಚದುರಂಗದಾಟ ಶುರುವಿಟ್ಟುಕೊಂಡಿದ್ದಳು. ಬಾಲ್ಯದಲ್ಲಿ ಈಕೆಯ ಪ್ರತಿಭೆಯನ್ನು ಗುರುತಿಸಿ ನೀರೆರೆದು ಪೋಷಿಸಿದ್ದು ಈಕೆಯ ತಂದೆ ತಾಯಿ. ತಂದೆ ಚೆಸ್ ಆಟಗಾರರಾಗಿದ್ದರಿಂದ, ಶ್ರೀಯಾನಳ ಗಮನವೂ ಎಳೆಯ ವಯಸ್ಸಿನಲ್ಲಿ ಚೆಸ್ ಆಟದತ್ತ ಸೆಳೆಯಿತು. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಮನೆಯಲ್ಲಿಯೇ ಚೆಸ್ ಆಟವಾಡುತ್ತಾ ಬೆಳೆದು ಬಂದ ಈಕೆ ತನ್ನ 5 ವರ್ಷ ವಯಸ್ಸಿನಲ್ಲಿ ಇತರ ಚೆಸ್ ಆಟಗಾರರಿಗೆ ಸವಾಲಾಗಿ ನಿಂತಳು.
ಡೆರಿಕ್ಸ್ ಚೆಸ್ ಸ್ಕೂಲ್ನಲ್ಲಿ ಗುರುಗಳಾದ ಡೆರಿಕ್ ಪಿಂಟೋ ಮತ್ತು ಪ್ರಸನ್ನ ರಾವ್ ಅವರ ಗರಡಿಯಲ್ಲಿ ಚೆಸ್ ಆಟವನ್ನು ಕರಗತ ಮಾಡಿಕೊಂಡ ಶ್ರೀಯಾನ ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಚೆಸ್ ಆಟಗಾರ್ತಿ. 2015 ರಲ್ಲಿ ಸುಳ್ಯದ ಜ್ಞಾನಗಂಗದಲ್ಲಿ ನಡೆದ ಚೆಸ್ ಸ್ಪರ್ಧೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿದ ಶ್ರೀಯಾನಳಿಗೆ ಸೋಲಾಗಿತ್ತು. ಆದರೆ ನಿರಾಶಾಳಾಗದೆ ಈಕೆ ಪ್ರಯಾಣವನ್ನು ಮುಂದುವರೆಸಿದ್ದಳು. ತದನಂತರ 2016 ರಲ್ಲಿ ಮಂಗಳೂರಿನ ಹಿಡನ್ ಕ್ಲಬ್ ಏರ್ಪಡಿಸಿದ್ದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನ ಮುಡಿಗೇರಿಸಿಕೊಂಡಳು. ಹೀಗೆ ಆರಂಭವಾದ ಜರ್ನಿಯಲ್ಲಿ ಮತ್ತೆಂದೂ ಹಿಂತಿರುಗಿ ನೋಡದ ಶ್ರೀಯಾನ ಇವತ್ತು ಸೋಲರಿಯದ ಚದುರಂಗದ ಆಟಗಾರ್ತಿಯಾಗಿದ್ದಾಳೆ.
ಚೆಸ್ನಲ್ಲಿ ಅಗಮ್ಯ ಸಾಧನೆ ಮಾಡಿರುವ ಶ್ರೀಯಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಚು ಪಡೆದು ಚದುರಂಗದಾಟದಲ್ಲಿ ಅಧಿಪತ್ಯ ಸ್ಥಾಪಿಸಿದ್ದಾಳೆ. ಮಂಗಳೂರಿನ ಈ ಬಾಲೆ ರೋಮೆನಿಯಾದಲ್ಲಿ ವಿಶ್ವ ಹಾಗೂ ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ, ಚದುರಂಗದಾಟವಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.
ಚೆಸ್ ಪೋರಿ ಶ್ರೀಯಾನಗೆ ರಾಷ್ಟ್ರಮಟ್ಟದಲ್ಲಿಯೂ ಗುರುತಿಸಿಕೊಂಡಿರುವ ಹೆಮ್ಮೆ ಇದೆ. 2017 ರಲ್ಲಿ ನಾಗಪುರದಲ್ಲಿ ನ್ಯಾಷನಲ್ ಸ್ಕೂಲ್ ಏರ್ಪಡಿಸಿದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಮೊದಲ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ಕರಾವಳಿಯ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದಾಳೆ.
2016 ರಲ್ಲಿ ಕರ್ನಾಟಕ ಸ್ಟೇಟ್ ಚೆಸ್ ಚಾಂಪಿಯನ್ಶಿಪ್ನಲ್ಲಿ 4ನೇ ಸ್ಥಾನ, ಮಂಡ್ಯದಲ್ಲಿ ನಡೆದ ಕರ್ನಾಟಕ ಸ್ಟೇಟ್ ಚೆಸ್ ಚಾಂಪಿಯನ್ಶಿಪ್ನಲ್ಲಿ 2 ನೇ ಸ್ಥಾನ, 2017 ರಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸ್ಟೇಟ್ ಗರ್ಲ್ಸ್ ಚಾಂಪಿಯನ್ ಶಿಪ್ನಲ್ಲಿ ಮೊದಲ ಸ್ಥಾನ ಹೀಗೆ ರಾಜ್ಯ ಮಟ್ಟದಲ್ಲಿ ನಡೆದ ವಿವಿಧ ಚೆಸ್ ಸ್ಪರ್ಧೆಗಳಲ್ಲಿ 17 ಬಹುಮಾನಗಳನ್ನು ತನ್ನ ಬಗಲಿಗೆ ಹಾಕಿಕೊಂಡಿದ್ದಲ್ಲದೆ ಎಳೆಯ ವಯಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಕರ್ನಾಟಕದಾದ್ಯಂತ ಮಿಂಚಿದ್ದಾಳೆ.
ಇಷ್ಟೇ ಅಲ್ಲದೆ ಅಂತರ್ ಜಿಲ್ಲಾ ಸ್ಪರ್ಧೆಯಲ್ಲಿ ಈಗಾಗಲೇ 15 ಕ್ಕೂ ಮಿಕ್ಕಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿರುವ ಈಕೆ ಹಿರಿಯ ಚೆಸ್ ಆಟಗಾರರ ಮುಂದೆಯೂ ಆಟವಾಡಿ ಗೆದ್ದಿದ್ದಾಳೆ. 2016 ರಲ್ಲಿ ಗೋನ್ಝಾಗ ಓಪನ್ ರ್ಯಾಪಿಡ್ ಆಲ್ಟಿನೊವೋ ಸೊಲ್ಯುಷನ್ಸ್ ಏರ್ಪಡಿಸಿದ್ದ ಚೆಸ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ, ಟಿಎಎಂಪಿಐ ಲಯನೆಸ್ ಮತ್ತು ಲಯನ್ಸ್ ಕ್ಲಬ್ ಮಣಿಪಾಲ ಏರ್ಪಡಿಸಿದ್ದ ಚೆಸ್ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಪಡೆದು ಅಂತರ್ ಜಿಲ್ಲೆಯಲ್ಲಿ ಅನೇಕ ಪ್ರಥಮ ದ್ವೀತಿಯ ಸ್ಥಾನಗಳನ್ನು ಪಡೆದುಕೊಂಡಿದ್ದಾಳೆ.
ಸಣ್ಣ ವಯಸ್ಸಿನಿಂದಲೇ ಚದುರಂಗದಾಟದಲ್ಲಿ ಕಠಿಣ ಶ್ರಮವಹಿಸುತ್ತಿರುವ ಶ್ರೀಯಾನಳಿಗೆ ಚೆಸ್ನಲ್ಲಿ ಸಾಧನೆ ಮಾಡಬೇಕೆಂಬ ಹಠವಿದೆ. ವಿಶ್ವನಾಥನ್ ಆನಂದ್ ಮತ್ತು ಕಾಲ್ಸನ್ ಅವರನ್ನು ರೋಲ್ ಮಾಡೆಲ್ ಮಾಡಿಕೊಂಡಿರುವ ಈಕೆಯ ಜಾಣ್ಮೆಗೆ ಪ್ರಶಸ್ತಿ ಪುರಸ್ಕಾರಗಳ ಹೊಳೆಯೇ ಹರಿದು ಬಂದಿದೆ. ಮಾತ್ರವಲ್ಲದೇ ಕರ್ನಾಟದಲ್ಲಿರೋ ಮಹಿಳಾ ಚೆಸ್ ಸಾಧಕರಲ್ಲಿ ಬರೀ ಮೂರು ಮಂದಿಗೆ ವುಮೆನ್ಸ್ ಕ್ಯಾಂಡಿಡೇಟ್ ಮಾಸ್ಟರ್ ಬಿರುದಿದ್ದು, ಅದರಲ್ಲಿ ಶ್ರೀಯಾನ ಕೂಡ ಒಬ್ಬಳಾಗಿದ್ದಾಳೆ.
ಸ್ವಿಮ್ಮಿಂಗ್, ಸ್ಕೇಟಿಂಗ್, ಡ್ರಾಯಿಂಗ್, ನೃತ್ಯ, ಸಂಗೀತ ಕ್ಷೇತ್ರಗಳಲ್ಲಿಯೂ ಛಾಪು ಮೂಡಿಸಿರುವ ಈಕೆ ಬಹುಮುಖ ಪ್ರತಿಭೆಯೂ ಹೌದು. ಲೂಡ್ಸ್ ಸೆಂಟ್ರಲ್ ಸ್ಕೂಲ್ನಲ್ಲಿ 2 ನೇ ತರಗತಿಯಲ್ಲಿ ಕಲಿಯುತ್ತಿರುವ ಶ್ರಿಯಾನ ಆಟ ಪಾಠ ಎರಡನ್ನು ಸಮಾನವಾಗಿ ಕಂಡಿದ್ದು, ಚೆಸ್ನಲ್ಲಿಯೇ ಈಕೆಗೆ ಸಾಧನೆ ಮಾಡಬೇಕೆಂಬ ಬಯಕೆಯಿದೆ.