ಬೆಂಗಳೂರು,ಫೆ 18 : ಈ ಬಾರಿಯ ವಿಧಾನ ಸಭೆ ಚುನಾವಣೆಗೆ ದಾಖಲೆ ಮಟ್ಟದಲ್ಲಿ ಮಹಿಳಾ ಮತದಾರರ ನೋಂದಣಿ ಸಂಖ್ಯೆ ಹೆಚ್ಚಾಗಿದ್ದು, ಹೀಗಾಗಿ ಮಹಿಳಾ ಮತದಾರರು ಹೆಚ್ಚಾಗಿರುವ ಮತಗಟ್ಟೆಗಳಲ್ಲಿ ಮಹಿಳಾ ಮತಗಟ್ಟೆಗಳನ್ನು ನಿರ್ಮಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಬಗ್ಗೆ ಫೆ 17 ರ ಶನಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್, ಕಳೆದ ನವೆಂಬರ್ ತಿಂಗಳಿನಲ್ಲಿ ರಾಜ್ಯ ಚುನಾವಣಾ ಆಯೋಗ ನಡೆಸಿದ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಒಟ್ಟಾರೆ 30.41 ಲಕ್ಷ ಅರ್ಜಿಗಳು ನೋಂದಾಣಿಯಾಗಿದ್ದವು. ಈ ಪೈಕಿ 29.54 ಅರ್ಜಿಗಳು ಅಂಗೀಕೃತವಾಗಿವೆ. 18ರಿಂದ 19 ವರ್ಷ ವಯೋಮಾನದ ಅರ್ಜಿಗಳಾಗಿವೆ. ಪ್ರಮುಖವಾಗಿ ಮಹಿಳಾ ಮತದಾರರ ನೋಂದಣಿ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಅಂಗವಿಕಲರು, ಕಾಯಿಲೆಗಳಿಂದ ಬಳಲುತ್ತಿರುವವರನ್ನು ಮತಗಟ್ಟೆಗೆ ಕರೆದುಕೊಂಡು ಬರುವುದಕ್ಕಾಗಿ ವ್ಹೀಲ್ ಚೇರ್ ಸೇರಿದಂತೆ ವಾಹನ ಸೌಲಭ್ಯ ಕಲ್ಪಿಸಲಾಗುವುದು. ಮಹಿಳಾ ಮತದಾರರು ಹೆಚ್ಚಿರುವ ಮತಗಟ್ಟೆಗಳಲ್ಲಿ ಮಹಿಳಾ ಮತಗಟ್ಟೆಗಳನ್ನು ನಿರ್ಮಿಸಲಾಗುವುದು. ಇಲ್ಲಿ ಮಹಿಳೆಯರನ್ನೇ ಚುನಾವಣಾ ಸಿಬ್ಬಂದಿಯಾಗಿ ಹಾಗೂ ಭದ್ರತೆಗೆ ನಿಯೋಜಿಸಲಾಗುವುದು ಎಂದಿದ್ದಾರೆ.