ಕುಂದಾಪುರ, ಮಾ13 ( Daijiworld News/MSP): ಭಾರತೀಯ ದೇಶಿ ಗೋವಿನ ಪಂಚಗವ್ಯಕ್ಕೆ ವಿಶೇಷ ಶಕ್ತಿ ಹಾಗೂ ಮಹತ್ವವಿದೆ. ಆದರೆ ಇವತ್ತು ಆರ್ಥಿಕತೆಯ ದೃಷ್ಟಿಯಿಂದ ದೇಶಿತಳಿ ಅವನತಿಯತ್ತ ಸರಿಯುತ್ತಿದೆ. ಎಚ್.ಎಫ್. ಮತ್ತು ಜೆರ್ಸಿ ಹಸುಗಳ ವ್ಯಾಪಕ ಬಳಕೆ ಮಾಡಲಾಗುತ್ತಿದೆ. ಹಾಲಿಗೋಸ್ಕರ ತಳಿಯನ್ನು ಸಂಕರೀಕರಣಗೊಳಿಸಿ, ಹಾರ್ಮೋನ್ ಟ್ರೀಟ್ ಮಾಡಿ ಹಾಲಿನ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ಪುರಾತನವಾದ ಭಾರತೀಯ ಗೋವಂಶದ ಗೀರ್, ರಾಟಿ, ಸಾಹಿವಾಲ್, ಮಲೆನಾಡು ಗಿಡ್ಡ, ಪುಂಗನೂರು ಹೀಗೆ 31ಜಾತಿಯ ಹಸುಗಳು ಇವತ್ತು ಅಪರೂಪಕ್ಕೆಂಬಂತೆ ಕಾಣ ಸಿಗುತ್ತಿವೆ. ಇಂಥಹ ಅಪರೂಪವಾಗುತ್ತಿರುವ ಭಾರತೀಯ ಗೋ ತಳಿಯ ಪರಿಚಯಿಸುವ, ದೇಶಿ ಗೋವಿನಿಂದ ವಿವಿಧ ಗೋ ಉತ್ಪನ್ನಗಳನ್ನು ತಯಾರಿಸುವ ಗೋಶಾಲೆಯೊಂದು ಕುಂದಾಪುರ ಸಮೀಪದ ಬೀಜಾಡಿಯಲ್ಲಿದೆ. ಅದುವೇ ಗೋಪಾಡಿ ಚಿಕ್ಕು ಅಮ್ಮನವರ ದೇವಸ್ಥಾನದ ಎದುರಿಗಿರುವ ಕಪಿಲೆ ಗೋ ಸಮೃದ್ದಿ ಟ್ರಸ್ಟ್.
ಕಪಿಲೆ ಗೋ ಸಮೃದ್ದಿ ಟ್ರಸ್ಟ್ನಲ್ಲಿ ಸುಮಾರು ಐದು ಅಳಿವಿನಂಚಿನ ಗೋ ತಳಿಗಳ ೩೫ಕ್ಕೂ ಹೆಚ್ಚು ಹಸುಗಳಿವೆ. ಗೀರ್, ರಾಟಿ, ಸಾಹಿವಾಲ್, ಮಲೆನಾಡ್ ಗಿಡ್ಡ, ಬುಲ್ ಅಲ್ಲದೇ ಕಪಿಲೆ ವಂಶಕ್ಕೆ ಸೇರಿದ ಹಸುವಿನ ತಳಿಗಳ ಅಪರೂಪದ ಹಸುಗಳು, ಎತ್ತುಗಳು, ಕರುಗಳು ಇಲ್ಲಿವೆ. ಈ ಭಾಗಕ್ಕೆ ತೀರಾ ಅಪರೂಪದ ಎತ್ತರದ ಭುಜ ಇರುವ, ಉದ್ದ ಕೋಡುಗಳನ್ನು ಹೊಂದಿರುವ ದನಗಳು ಇಲ್ಲಿವೆ. ಈ ಭಾಗದ ಸಾಂಪ್ರಾದಾಯಿಕ ಮಲೆನಾಡ್ ಗಿಡ್ಡ ತಳಿಗಳನ್ನು ನೋಡಿದ ನಮಗೆ ಉದ್ದದ ಕೋಡುಗಳು, ಎತ್ತರದ ಭುಜದ ಗೋ ಕಂಡಾಗ ಎತ್ತು, ಗೂಳಿ ಎನ್ನುವ ಕಲ್ಪನೆ ಮೂಡುತ್ತದೆ.
ಕೆ.ಎಸ್.ಕಾಂಚನ್ ಎನ್ನುವ ಗೋರಕ್ಷಕ
ಬೀಜಾಡಿಯ ಕೆ.ಎಸ್. ಕಾಂಚನ್ ಅವರು ಓದಿದ್ದು ಕಂಪ್ಯೂಟರ್ ಡಿಪ್ಲಮೋ. ಚಿಕ್ಕಮಗಳೂರಿನಲ್ಲಿ 25 ವರ್ಷಗಳಿಂದ ಕಂಪ್ಯೂಟರ್ ಸೆಂಟರ್, ಕಂಪ್ಯೂಟರ್ ತರಬೇತಿ ಇತ್ಯಾದಿ ತಾಂತ್ರಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಆಧ್ಯಾತ್ಮಕತೆಯೆಡೆಗೂ ಮನಸ್ಸು ಮಾಡುವ ಗೋವಿನ ವಿಚಾರದಲ್ಲಿ ಸಾಕಷ್ಟು ಆಸಕ್ತಿ ತಾಳುತ್ತಾರೆ. ದೇಶಿಗೋವುಗಳ ಸಂರಕ್ಷಣೆ, ಜಾಗೃತಿ ತನ್ನೂರಿನಲ್ಲಿ ಆಗಬೇಕು ಎನ್ನುವ ಕನಸು ಕಟ್ಟಿಕೊಳ್ಳುತ್ತಾರೆ. ಅದಕ್ಕೆ ಮೂರು ವರ್ಷದ ಹಿಂದೆ ಅನುಕೂಲಕರ ಅವಕಾಶವೂ ಲಭಿಸುತ್ತದೆ. ಹುಟ್ಟೂರು ಬೀಜಾಡಿಗೆ ಆಗಮಿಸಿದ ಅವರು ಮನೆಯ ಸಮೀಪದಲ್ಲಿಯೇ ಗೋಶಾಲೆಯೊಂದನ್ನು ಆರಂಭಿಸುತ್ತಾರೆ. ಕೇವಲ 7 ಮಲೆನಾಡು ಗಿಡ್ಡ ಗೋವುಗಳಿಂದ ಆರಂಭವಾದ ಹಟ್ಟಿ ಇವತ್ತು 35 ಕ್ಕೂ ಹೆಚ್ಚು ಗೋವುಗಳಿಂದ ತುಂಬಿದೆ.
ಪಂಜಾಬ್, ಗುಜರಾತ್ನ ಗೋವುಗಳು
ಗೋಶಾಲೆ ಆರಂಭಿಸಿದ ಕಾಂಚನ್ ಅಪರೂಪದ ದೇಶಿ ಹಸುಗಳ ಶೋಧ ಆರಂಭಿಸಿ, ಗುಜರಾತ್, ಪಂಜಾಬ್ಗಳಿಂದ ಗೀರ್, ರಾಟಿ, ಸಾಹಿವಾಲ್, ಪುಂಗನೂರು ಮೊದಲಾದ ತಳಿಯ ಗೋವುಗಳನ್ನು ಖರೀದಿಸಿ ತಂದರು. ಸಾಂಪ್ರಾದಾಯಿಕ ಕೃಷಿ ಕುಟುಂಬದಿಂದ ಬಂದಿರುವ ಇವರಿಗೆ ಗೋ ಸಾಕಾಣಿಕೆ ಕಷ್ಟವೆನಿಸಲಿಲ್ಲ. ದೇಶಿ ಗೋ ವಂಶ ಮತ್ತು ಗೋ ಉತ್ಪನ್ನಗಳ ತಯಾರಿಯ ಬಗ್ಗೆ ಈಗಾಗಲೇ ದೇಶಿ ಗೋ ಉತ್ಪತ್ನಗಳಿಗೆ ಏಳು ಪೇಟೆಂಟ್ ಪಡೆದ ನಾಗ್ಪುರದಲ್ಲಿ ತರಬೇತಿ ಪಡೆದರು.
ಬದುಕು ಬದಲಾಯಿಸಿದ ಚಳ್ಳಕೆರೆ ಏಳು ಹಸುಗಳು
ನಾಲ್ಕು ವರ್ಷಗಳ ಹಿಂದೆ ಚಳ್ಳೆಕೆರೆ ಸಮೀಪ 7 ಹಸುಗಳನ್ನು ಕಸಾಯಿಖಾನೆಗೆ ತಗೆದುಕೊಂಡು ಹೋಗುತ್ತಿರುವುದನ್ನು ಕಂಡೆ. ಈ ದೇಶದ ಸಂಪತ್ತು ಆಗಿರುವ ಮಲೆನಾಡ್ ಗಿಡ್ಡ ತಳಿಯ ದನಗಳಾಗಿದ್ದವು ಅವು. ಆ ದನಗಳನ್ನು ಅವರಿಂದ ಖರೀದಿಸಿದೆ. ಆ ಮೊದಲೇ ನನಗೆ ಸ್ವದೇಶಿ ದನಗಳ ಗೋಶಾಲೆ ಮಾಡುವ ಕನಸಿತ್ತು. ಈ ಏಳು ದನಗಳ ಸಿಕ್ಕಬಳಿಕ ತಕ್ಷಣ ಯೋಜನೆ ರೂಪಿಸಿ, ಬೀಜಾಡಿಯಲ್ಲಿ ಈ ಗೋಶಾಲೆ ಮಾಡಿದೆ. ಇವತ್ತು ಐದು ಜಾತಿಯ ದೇಶಿ ಗೋವುಗಳು, ಗೂಳಿಗಳು, ಕರುಗಳು ಇವೆ. ನಾನು ಈ ಬಗ್ಗೆ ಬೇರೆ ಬೇರೆ ರಾಜ್ಯಗಳಲ್ಲಿ ತರಬೇತಿ ಪಡೆದುಕೊಂಡೆ. ದೇಶಿ ತಳಿಯ ಸಂರಕ್ಷಣೆಯ ಜೊತೆಗೆ ಜಾಗೃತಿ ಮೂಡಿಸುವ ಕೆಲಸದಲ್ಲಿಯೂ ತೊಡಗಿದ್ದೇನೆ. ನನ್ನ ಈ ಪ್ರವೃತ್ತಿಗೆ ಮನೆಯವರೆಲ್ಲ ತುಂಬಾ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಕುಮಾರ್ ಕಾಂಚನ್.
ಹೈಡ್ರೋಫೊನಿಕ್ನಲ್ಲಿ ಜೋಳ ಸಸಿ ತಯಾರಿ
ಹಸಿರು ಮೇವು ಯಥೇಚ್ಛವಾಗಿ ಬಳಸಲಾಗುತ್ತದೆ. ಹೈಡ್ರೋಫೊನಿಕ್ ಘಟಕದಲ್ಲಿ ಟ್ರೈ ಸಿಸ್ಟಮ್ನಲ್ಲಿ ಜೋಳದ ಸಸಿಗಳನ್ನು ತಯಾರಿಸಲಾಗುತ್ತಿದೆ. ನೀರು ನಿರ್ವಹಣೆಗೆ ಟೈಮರ್ ಬಳಕೆ ಮಾಡಲಾಗಿದೆ. 9 ದಿನಕ್ಕೆ ಚೆನ್ನಾಗಿ ಬಲಿತ ಜೋಳದ ಸಸಿಗಳು ಹಸುವಿಗೆ ಬಳಸಲು ದೊರೆಯುತ್ತದೆ. ಜೋಳದ ಸಸಿಯಲ್ಲಿ ಅತ್ಯಧಿಕ ಪೌಷ್ಟಿಕಾಂಶ ಇದ್ದು ಹಸುಗಳಿಗೆ ಇದು ಅತ್ಯುತ್ತಮ ಪೌಷ್ಟಿಕಾಹಾರ. ಅಗತ್ಯಕ್ಕೆ ತಕ್ಕಂತೆ ಟ್ರೈಗಳನ್ನು ಸಿದ್ಧಪಡಿಸಲಾಗುತ್ತದೆ.
ಇವತ್ತಿನ ಪಶು ಆಹಾರವೆಂದರೆ ಅದು ಕಲಬೆರಕೆ ಹಾಗೂ ರಾಸಾಯನಿಕ ಪ್ರೇರಿತವಾಗಿರುವುದು ಸ್ವಾಭಾವಿಕ. ಇಲ್ಲಿ ಪಶು ಆಹಾರವನ್ನು ಇಲ್ಲಿಯೇ ದ್ವಿದಳ ಧಾನ್ಯಗಳನ್ನು ತರಿಸಿಕೊಂಡು ತಯಾರಿಸಲಾಗುತ್ತಿದೆ. ಹಸಿರು ಹುಲ್ಲು ಬೆಳೆಸಲಾಗುತ್ತಿದೆ. ಜೋಳದ ಸಸಿಗಳನ್ನು ಹೈಡ್ರೋನಿಕ್ ವ್ಯವಸ್ಥೆಯಲ್ಲಿ ತಯಾರಿಸಿ ಹಸುಗಳಿಗೆ ಹಾಕಲಾಗುತ್ತದೆ. ಉದ್ಯೋಗ ಸೃಷ್ಟಿಗೂ ಅವಕಾಶ ಮಾಡಿಕೊಡಲಾಗಿದೆ.
ಮಾಹಿತಿಗೆ ಕುಮಾರ್ ಕಾಂಚನ್, ದೂರವಾಣಿ 9482671333 ಸಂಪರ್ಕಿಸಬಹುದು.