ಬಂಟ್ವಾಳ, ಮಾ 13 (DaijiworldNews/SM): ಕಂಚಿನಡ್ಕ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪುರಸಭಾ ಇಲಾಖೆ ಕಸವಿಲೇವಾರಿಗೆಂದು ತೆರಳಿದಾಗ ಸ್ಥಳೀಯ ಗ್ರಾ.ಪಂ.ಹಾಗೂ ಸ್ಥಳೀಯರು ಕಸತುಂಬಿದ ಲಾರಿ ಸಹಿತ ಅಧಿಕಾರಿಗಳನ್ನು ವಾಪಾಸು ಕಳುಹಿಸಿದ ಘಟನೆ ಬುಧವಾರ ನಡೆದಿದೆ.
ಪುರಸಭಾ ವ್ಯಾಪ್ತಿಯಲ್ಲಿ ನ ಕಸ ವಿಲೇವಾರಿಯನ್ನು ಸಜೀಪನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವು ಕಲ್ಲಿನ ಕೋರೆಯಲ್ಲಿ ಹಾಕುವ ಉದ್ದೇಶದಿಂದ 2006 ರಲ್ಲಿ 9 ಎಕರೆ ಜಮೀನು ಕಾದಿರಿಸಿ ಕಾಮಗಾರಿಯನ್ನು ನಡೆಸಿತ್ತು. ಆದರೆ ಈ ತ್ಯಾಜ್ಯ ಸಂಸ್ಕರಣಾ ಘಟಕಗದ ಸುತ್ತಮುತ್ತ ಹಲವಾರು ಮನೆಗಳು, ಸರಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿದ್ದ ಕಾರಣ ಈ ಜಾಗ ಸೂಕ್ತವಲ್ಲ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು.
ಗ್ರಾಮ ಪಂಚಾಯತ್ ಹಾಗೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ಇಲ್ಲಿನ ಮೂಲ ನಿವಾಸಿಗಳಿಗೆ ಹಾಗೂ ಸರಕಾರಿ ಶಾಲೆಗೆ ಬದಲಿ ವ್ಯವಸ್ಥೆ ಕಲ್ಪಿಸಿದ ಬಳಿಕ ಈ ಜಾಗದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಮಾಡುವಂತೆ ಅನೇಕ ಬಾರಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತಿಳಿಸಲಾಗಿತ್ತು. ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ತ್ಯಾಜ್ಯ ಶೇಖರಣೆ ಮಾಡಬೇಕು ಹಾಗೂ ಸ್ಥಳೀಯ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆ ಅಗದಂತೆ ವೈಜ್ಞಾನಿಕ ರೀತಿಯಲ್ಲಿ ಮಾಡುವಂತೆ ಸ್ಥಳೀಯ ಪುರಸಭಾ ಇಲಾಖೆಗೆ ನಿರ್ದೇಶನ ನೀಡಿತ್ತು.
ಇತ್ತೀಚಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಬಿಸಿರೋಡಿನ ತಾ.ಪಂ.ನ ಸಭಾಂಗಣದಲ್ಲಿ ನಡೆದ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಅವರಲ್ಲಿ ಈ ಘಟಕದ ಬಗ್ಗೆ ವಿಚಾರಿಸಿದಾಗ ಒಂದು ತಿಂಗಳೊಳಗೆ ಘಟಕಕ್ಕೆ ಕಸ ಹಾಕುವ ಬಗ್ಗೆ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ಹಾಕಲು ಹೋದ ವೇಳೆ ಸ್ಥಳೀಯ ಗ್ರಾ.ಪಂ.ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಬಳಿಕ ಹೋದ ದಾರಿಗೆ ಸುಂಕವಿಲ್ಲ ಎಂದು ವಾಪಾಸು ಬಂದ ಘಟನೆ ನಡೆದಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡಲು ಜಾಗದ ಕೊರತೆಯಿರುವುದರಿಂದ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಳೆದ ಹಲವಾರು ವರ್ಷಗಳಿಂದ ತ್ಯಾಜ್ಯವನ್ನು ಕೊಂಡು ಹೋಗುತ್ತಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿಯೂ ಸಮಸ್ಯೆ ಉದ್ಬವವಾದ್ದರಿಂದ ಬಂಟ್ವಾಳ ದ ತ್ಯಾಜ್ಯ ಗಳನ್ನು ವಿಲೇವಾರಿ ಮಾಡುವುದೇ ಪುರಸಭೆಗೆ ದೊಡ್ಡ ಸವಾಲಾಗಿದೆ.
ಹಾಗಾಗಿ ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ನಿರ್ಮಾಣ ವಾದ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಸವನ್ನು ಶೇಖರಣೆಗಾಗಿ ಮುಂದಾಗಿತ್ತು.
ಆದರೆ ಅಲ್ಲಿನ ಸ್ಥಳೀಯರ ಬೇಡಿಕೆ ಯನ್ನು ಈಡೇರಿಸಲು ಹಿಂದೇಟು ಹಾಕಿದ ಪುರಸಭೆ ಕೊಂಡೊಯ್ದ ಕಸವನ್ನು ವಾಪಾಸು ತರುವಂತೆ ಮಾಡಿದೆ.