ಫೆ.18: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ವಜ್ರ ವ್ಯಾಪಾರಿ ನೀರವ್ ಮೋದಿ ವಂಚಿಸಿದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಫೆ.16ರ ಶುಕ್ರವಾರ ರಾತ್ರಿ ಮೂವರನ್ನು ಬಂಧಿಸಿದೆ.
ನೀರವ್ ಮೋದಿ ಕಂಪನಿಯ ವಹಿವಾಟು ಜವಾಬ್ದಾರಿ ಹೊತ್ತಿದ್ದ ಹೇಮಂತ್ ಭಟ್, ಪಂಜಾಬ್ ನ್ಯಾಷನಲ್ ಬ್ಯಾಂಕ್ನ(ಪಿಎನ್ಬಿ) ನಿವೃತ್ತ ಉಪ ವ್ಯವಸ್ಥಾಪಕ ಗೋಕುಲನಾಥ್ ಶೆಟ್ಟಿ ಮತ್ತು ಪಿನ್ಬಿಯ ಮತ್ತೊಬ್ಬ ಅಧಿಕಾರಿ ಮನೋಜ್ ಕಾರಟ್ ಎಂಬುವವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಈ ಮೂವರನ್ನು ಹಾಜರುಪಡಿಸಲಾಗಿದೆ. ಆರೋಪಿಗಳನ್ನು 14 ದಿನಗಳ ಸಿಬಿಐ ವಶಕ್ಕೆ ನೀಡಲಾಗಿದೆ. ನೀರವ್ ಮೋದಿ ಸಾಲ ಪಡೆಯಲು ನಕಲಿ ಖಾತರಿ ಪತ್ರಗಳನ್ನು ಒದಗಿಸಿದ್ದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.
ಇನ್ನು ಬಂಧಿತ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ನಿವೃತ್ತ ಉಪ ವ್ಯವಸ್ಥಾಪಕ ಗೋಕುಲನಾಥ್ ಶೆಟ್ಟಿ ಮೂಲ್ಕಿ ಮೂಲದವರು. ಇವರ ತಾಯಿ ಮನೆ ಶಿಮಂತೂರು ಬಾವ ಮನೆತನದವರಾಗಿದ್ದಾರೆ. ಅವರ ತಾಯಿಯ ಹೆಸರು ಜಾನಕಿ, ಹಾಗೂ ತಂದೆಯ ಹೆಸರು ರಾಘು ಶೆಟ್ಟಿ, ಇವರು ಗ್ರಾಮದ ಪಟೇಲರಾಗಿದ್ದು ಉತ್ತಮ ಸ್ಥಿತಿವಂತರಾಗಿದ್ದರು. ಪಲಿಮಾರು ಹೈಸ್ಕೂಲ್ ನಲ್ಲಿ ಶಿಕ್ಷಣ ಮುಗಿಸಿ ಬಳಿಕ 1979ರಲ್ಲಿ ಮುಲ್ಕಿ ವಿಜಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಹಾಗೂ ಪದವಿ ಪಡೆದಿದ್ದರು. ಶಿಕ್ಷಣ ಮುಗಿಸಿ ಮುಂಬಯಿಗೆ ತೆರಳಿದ ಇವರು ವರ್ಷದ ಕೆಲವು ದಿನಗಳಲ್ಲಿ ಮಾತ್ರ ಊರಿಗೆ ಬರುತ್ತಿದ್ದರು. ಕಳೆದ ಡಿಸೆಂಬರ್ ನಲ್ಲಿ ಕಂಬಳ ದಿನ ಊರಿಗೆ ಬಂದು ಹೋಗಿದ್ದರು ಎಂದು ಸ್ಥಳೀಯರು, ಹಾಗೂ ಸಂಬಂಧಿಗಳು ಮಾಹಿತಿ ನೀಡಿದ್ದಾರೆ. ಇನ್ನು ಇವರ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಅಮೆರಿಕಾ ಪ್ರಜೆಗಳಾಗಿದ್ದು ಮಕ್ಕಳ ವಿದ್ಯಾಭ್ಯಾಸವು ಅಲ್ಲಿಯೇ ನಡೆಯುತ್ತಿದೆ.