ಬೆಳ್ತಂಗಡಿ: ಮಾ 12 (DaijiworldNews/SM): ಸರಿಸುಮಾರು ನಾಲ್ಕೂವರೆ ತಿಂಗಳುಗಳ ಬಳಿಕ ಬೆಳ್ತಂಗಡಿ ನಗರ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸರಕಾರ ಮೀಸಲಾತಿ ಪ್ರಕಟಿಸಿದೆ. ಅದರ ಪ್ರಕಾರ ಸ್ಪಷ್ಟ ಬಹುಮತ ಇರುವ ಭಾರತೀಯ ಜನತಾ ಪಾರ್ಟಿ ಪ್ರಥಮ ಬಾರಿಗೆ ನಗರ ಪಂಚಾಯತ್ ಗದ್ದುಗೆ ಏರಲಿದೆ. ನಗರ ಪಂಚಾಯತ್ ಇತಿಹಾಸದಲ್ಲೇ ಇದು ಬಿಜೆಪಿಗೆ ಮೊದಲ ಅಧಿಕಾರಾವಧಿಯಾಗಿದೆ.
11 ಸ್ಥಾನವಿರುವ ಬೆಳ್ತಂಗಡಿ ನಗರ ಯಾನೆ ಪಟ್ಟಣ ಪಂಚಾಯತಿಗೆ 2019ರ ಅಕ್ಟೋಬರ್ 28ರಂದು ಚುನಾವಣೆ ನಡೆದು 31ರಂದು ಫಲಿತಾಂಶ ಪ್ರಕಟವಾಗಿತ್ತು. ಇದರಲ್ಲಿ 7 ಸ್ಥಾನಗಳನ್ನು ಬಿಜೆಪಿ ಪಡೆದರೆ 4 ಸ್ಥಾನಗಳನ್ನು ಮಾತ್ರವೇ ಕಾಂಗ್ರೇಸ್ ಗೆದ್ದುಕೊಂಡಿತ್ತು. ಹೀಗಾಗಿ ಬಿಜೆಪಿ ಅಧಿಕಾರ ಹಿಡಿಯಲು ಸಜ್ಜಾಗಿತ್ತು. ಆದರೆ ಮೀಸಲಾತಿಯ ಗೊಂದಲದಿಂದಾಗಿ ಹಾಗೂ ವಿಳಂಬದಿಂದಾಗಿ ನಾಲ್ಕೂವರೆ ತಿಂಗಳುಗಳ ಕಾಲ ನಗರ ಪಂಚಾಯತ್ ನಲ್ಲಿ ಜನಪ್ರತಿನಿಧಿಗಳಿಗೆ ಯಾವುದೇ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ.
ಬಿಜೆಪಿಗೆ ಪೂರ್ಣ ಬಹುಮತ ಇರುವುದರಿಂದ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ತಕರಾರು ಇಲ್ಲವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮೀಸಲಾತಿ ಇದ್ದು ವಾರ್ಡ್ 11ರಲ್ಲಿ ಗೆದ್ದಿರುವ ಜಯಾನಂದ ಗೌಡ ಮತ್ತು ವಾರ್ಡ್ ೩ರಲ್ಲಿ ಗೆದ್ದಿರುವ ಶರತ್ಕುಮಾರ್ ಅರ್ಹರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಬಂದಿರುವುದರಿಂದ ಎಲ್ಲಾ 11 ವಾರ್ಡ್ಗಳಲ್ಲಿ ಗೆದ್ದಿರುವವರಿಗೆ ಅವಕಾಶವಿದೆಯಾದರೂ ಬಹುಮತದ ಆಧಾರದಲ್ಲಿ ಪಕ್ಕಾ ಬಿಜೆಪಿಯ ಸದಸ್ಯರೇ ಆಯ್ಕೆಯಾಗುವ ಸಂಭವವಿದೆ.
ಬೆಳ್ತಂಗಡಿ ನಗರ ಪ್ರದೇಶ 1996ರಿಂದ ಪಟ್ಟಣ ಪಂಚಾಯತಿಯಾಗಿದೆ. 1996 ರಿಂದ 2003ರವರೆಗೆ ಜೆಡಿಎಸ್-ಕಾಂಗ್ರೇಸ್, ಕಾಂಗ್ರೇಸ್-ಬಿಜೆಪಿ ಹೀಗೆ ಸಮ್ಮಿಶ್ರ ಆಡಳಿತವನ್ನು ಪಂಚಾಯತ್ ಕಂಡಿತ್ತು. ಬಳಿಕದ ವರ್ಷಗಳಲ್ಲಿ ಕಾಂಗ್ರೇಸ್ ಒಂದೇ ಆಡಳಿತ ನಡೆಸಿತ್ತು. ಇದೀಗ ಶಾಸಕರಾಗಿ ಹರೀಶ ಪೂಂಜ ಆಯ್ಕೆಯಾದ ಬಳಿಕ 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಪ್ರಥಮ ಬಾರಿಗೆ ಬಹುಮತ ಬಂದಿದೆ.
ಬಿಜೆಪಿ ತತ್ವ, ಸಿದ್ಧಾಂತ ಮತ್ತು ಶಿಸ್ತಿಗೆ ಹೆಸರಾಗಿರುವ ಪಕ್ಷವಾದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆಯಲ್ಲಿ ಇತರೇ ಪಕ್ಷಗಳಂತೆ ಯಾವುದೇ ಗೊಂದಲ, ಲಾಬಿ, ವಿರುದ್ದ ಮತ ನಡೆಯಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಶಾಸಕರ ನಿರ್ಣಯವೇ ಅಂತಿಮ ಎಂದೂ ಹೇಳಲಾಗುತ್ತಿದೆ. ಬಹುತೇಕ ಅವಿರೋಧ ಆಯ್ಕೆಯ ಸಂಭವವೇ ಹೆಚ್ಚಾಗಿದೆ.