ಉಡುಪಿ, ಮಾ 13 (DaijiworldNews/SM): ಕರಾವಳಿಯಲ್ಲಿ ಕೊರೊನಾ ಭೀತಿ ತೀವ್ರಗೊಳ್ಳುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಮತ್ತೋರ್ವ ವ್ಯಕ್ತಿಯಲ್ಲಿ ಶಂಕಿತ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಿದೆ.
ಶಂಕಿತ ಸೋಂಕು ಲಕ್ಷಣಗಳು ಕಂಡು ಬಂದಿರುವ ವ್ಯಕ್ತಿಯನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತೀವ್ರ ನಿಗಾ ವಹಿಸಲಾಗಿದೆ. ಉಡುಪಿಯ ಶಿರ್ವ ಮೂಲದ ವ್ಯಕ್ತಿಯಲ್ಲಿ ಈ ರೋಗ ಲಕ್ಷಣಗಳು ಕಂಡುಬಂದಿವೆ.
ಇನ್ನು ಈ ವ್ಯಕ್ತಿ ಜಪಾನ್ ನಲ್ಲಿ ಹಡಗಿನಲ್ಲಿ ಉದ್ಯೋಗದಲ್ಲಿದ್ದರು ಎಂದು ತಿಳಿದುಬಂದಿದೆ. ಊರಿಗೆ ಮರಳಿ ಹಲವು ದಿನಗಳು ಕಳೆದಿದ್ದವು. ಇದೀಗ ಏಕಾಏಕಿ ಅನಾರೋಗ್ಯವುಂಟಾಗಿದ್ದು, ಕೊರೋನಾ ಸೋಂಕು ಲಕ್ಷಣಗಳು ಕಂಡು ಬಂದ ಹಿನ್ನೆಲೆ ತೀವ್ರ ನಿಗಾ ವಹಿಸಲಾಗಿದೆ. ಇನ್ನು ಆ ವ್ಯಕ್ತಿಯ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಸಲಾಗಿದ್ದು, ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟಗೊಳ್ಳಲಿದೆ.
ಇನ್ನು ಶುಕ್ರವಾರ ಬೆಳಿಗ್ಗೆ ಮಣಿಪಾಲ ಕೆ ಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ವಿದ್ಯಾರ್ಥಿಗಳಲ್ಲಿ ಶಂಕಿತ ಸೋಂಕು ಲಕ್ಷಣಗಳು ಕಂಡುಬಂದಿತ್ತು. ವಿದ್ಯಾರ್ಥಿಗಳು ಮಲೇಶ್ಯಾದಿಂದ ಆಗಮಿಸಿದ್ದರು. ಅವರನ್ನು ಐಸೋಲೇಷನ್ ವಾರ್ಡ್ ನಲ್ಲಿ ದಾಖಲುಗೊಳಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.