ಮಂಗಳೂರು, ಮಾ 13 (DaijiworldNews/SM): ರಾಜ್ಯಾದ್ಯಂತ ಕೊರೊನಾ ಮಹಾಮಾರಿ ಭೀತಿ ಹೆಚ್ಚಾಗುತ್ತಿದ್ದು, ಎಲ್ಲೆಡೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ನಡುವೆ ಶಾಲಾ ಕಾಲೇಜುಗಳ ಪರೀಕ್ಷೆ ಹೊರತುಪಡಿಸಿ ಉಳಿದಂತೆ ರಜೆ ನೀಡಲಾಗಿದೆ.
ಮಾಚ್೯ 14 ರಿಂದ 1 ರಿಂದ 6 ನೇ ತರಗತಿ ವರೆಗಿನ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿದೆ. ಒಂದು ವೇಳೆ ಪರೀಕ್ಷೆಗಳು ನಡೆಯುತ್ತಿದ್ದರೆ ಪರೀಕ್ಷೆಗಳನ್ನು ರದ್ದುಗೊಳಿಸಿ ಬೇಸಿಗೆ ರಜೆ ಘೋಷಿಸಬೇಕು ಎಂದು ಸೂಚಿಸಿದೆ. 7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 14ರಿಂದ ತರಗತಿಗಳನ್ನು ಸ್ಥಗಿತಗೊಳಿಸಿ ಪರೀಕ್ಷಾ ದಿನಗಳಂದು ಮಾತ್ರ ಹಾಜರಾಗಲು ಸೂಚಿಸಿದೆ. 7ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಾಂಕ 23-03-2020ರೊಳಗೆ ಪರೀಕ್ಷೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಿ ಬೇಸಿಗೆ ರಜೆ ಘೋಷಿಸುವಂತೆ ಆದೇಶ ಹೊರಡಿಸಲಾಗಿದೆ.
ಇನ್ನು SSLC ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಾಗಲೇ ನಿಗದಿಯಾಗಿರುವಂತೆ ಮಾಚ್೯ 27ರಿಂದ ಪರೀಕ್ಷೆ ನಡೆಯಲಿದೆ. ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಈಗಾಗಲೇ ಫೆಬ್ರವರಿಯಲ್ಲಿ ಮುಕ್ತಾಯಗೊಂಡಿದ್ದು ರಜೆ ನೀಡಲಾಗಿದೆ.
ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆ ಈಗಾಗಲೇ ಆರಂಭವಾಗಿದ್ದು, ನಿಗದಿಯಂತೆ ನಡೆಯಲಿವೆ. ಪದವಿ ವಿಭಾಗಗಳಿಗೆ ಮಾಚ್೯ 28ರವರೆಗೆ ರಜೆ ಘೋಷಣೆ ಮಾಡಲಾಗಿದೆ.