ಬೆಂಗಳೂರು, ಫೆ18: ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.ಫೆ ೧೭ ರ ಶನಿವಾರ ಯುಬಿ ಸಿಟಿಯಲ್ಲಿರುವ ಫೆಗ್ರಿ ಕಫೆ ರೆಸ್ಟೋರೆಂಟ್ ನಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಎಂಬ ವಿದ್ಯಾರ್ಥಿಗೆ ಬೇಕಾಬಿಟ್ಟಿ ಯಾಗಿ ಥಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ಥಾನದಿಂದ ಮೊಹಮ್ಮದ್ ನನ್ನು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದಾರೆ.
ಕಳೆದ ರಾತ್ರಿ ರೆಸ್ಟೋರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕೆ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಪಘಾತದಲ್ಲಿ ಮೊದಲೇ ಕಾಲು ಮುರಿದುಕೊಂಡಿದ್ದ ವಿದ್ವತ್ ಊಟಕ್ಕೆಂದು ಯುಬಿ ಸಿಟಿಗೆ ಬಂದಿದ್ದರು. ವಿದ್ವತ್ ಡಾಲರ್ಸ್ ಕಾಲೋನಿಯ ನಿವಾಸಿಯಾದ ಉದ್ಯಮಿ ಲೋಕನಾಥ್ ಎಂಬುವರ ಮಗ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಹಲ್ಲೆಗೆ ಒಳಗಾಗಿ ಗಂಭೀರ ಗಾಯಗೊಂಡ ವಿದ್ವತ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಳಿಕ ನಲಪಾಡ್ ನಾಪತ್ತೆಯಾಗಿದ್ದು, ಆತನ ತಂದೆ ಶಾಸಕ ಹ್ಯಾರಿಸಿ ಅವರು ಆಸ್ಪತ್ರೆಗೆ ಆಗಮಿಸಿ ಗಾಯಳು ವಿದ್ವತ್ ಕ್ಷೇಮ ವಿಚಾರಿಸಿದ್ದಾರೆ. ಇನ್ನು ನಲಪಾಡ್ ವಿರುದ್ದ ಕಬ್ಬನ್ ಪಾರ್ಕ್ ನಲ್ಲಿ ಕೊಲೆ ಯತ್ನ, ಬೆದರಿಕೆ ಪ್ರಕರಣ ದಾಖಲಾಗಿದೆ. ಹ್ಯಾರಿಸ್ ಬೆಂಬಲಿಗ ಅರುಣ್ ಬಾಬು ಎನ್ನುವವರು ಪ್ರತಿ ದೂರನ್ನೂ ದಾಖಲಿಸಿದ್ದಾರೆ.