ಮಂಗಳೂರು, ಮಾ14( Daijiworld News/MSP): ಕರಾವಳಿಯ 11 ಮಂದಿಯಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಅವರಿಗೆ ವಿಶೇಷ ವಾರ್ಡ್ ಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲಾರೂ ಇತ್ತೀಚಿಗೆ ವಿದೇಶಕ್ಕೆ ಭೇಟಿ ನೀಡಿ ಬಂದವರಾಗಿದ್ದಾರೆ.
ಮಂಗಳೂರಿನಲ್ಲಿ ಜ್ವರ, ಶೀತದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ವಿದೇಶದಿಂದ ಬಂದ ಆರು ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಅವರ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಇದರಲ್ಲಿ ನಾಲ್ಕು ಮಂದಿಯ ವರದಿ ಬಂದಿದ್ದು ಎಲ್ಲವೂ ನೆಗಟಿವ್ ಬಂದಿದೆ. ಇನ್ನಿಬ್ಬರ ವರದಿ ಇನ್ನಷ್ಟೇ ಬರಬೇಕಿದೆ.
ಇನ್ನು ಉಡುಪಿಯಲ್ಲಿ ಗುರುವಾರ ಮಣಿಪಾಲ ಆಸ್ಪತ್ರೆಗೆ ಸೇರಿದ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇಲ್ಲ ಎಂದು ಪರೀಕ್ಷೆಯಿಂದ ದೃಢಪಟ್ಟಿದೆ. ಆಂಧ್ರಪ್ರದೇಶ ಮತ್ತು ಕೇರಳ ಮೂಲದ ಈ ವಿದ್ಯಾರ್ಥಿಗಳು ಅಮೆರಿಕ ಮತ್ತು ಮಲೇಷ್ಯಾಕ್ಕೆ ಹೋಗಿ ಮಣಿಪಾಲಕ್ಕೆ ಆಗಮಿಸಿದ್ದರು. ಅವರಿಗೆ ಕಾಯಿಲೆಯ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಗಂಟಲು ದ್ರವ ಮತ್ತು ರಕ್ತ ಪರೀಕ್ಷೆಯನ್ನು ಶಿವಮೊಗ್ಗಕ್ಕೆ ಕಳುಹಿಸಲಾಯಿತು . ಇದೀಗ ನೆಗೆಟಿವ್ ಎಂದು ವರದಿ ಬಂದಿದೆ.
ಇನ್ನು ಮಣಿಪಾಲದಲ್ಲಿರುವ ದುಬೈ ಮೂಲದ ವಿದ್ಯಾರ್ಥಿ ಅವರಿಗೆ ಶುಕ್ರವಾರ ಅನಾರೋಗ್ಯ ಕಂಡುಬಂದ ಕಾರಣ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಗಂಟಲು ಮತ್ತು ರಕ್ತ ಪರೀಕ್ಷೆಯಲ್ಲಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಶನಿವಾರ ವರದಿ ಕೈಸೇರಲಿದೆ. ಇದಲ್ಲದೆ ಶಿರ್ವ ಮೂಲದ 37 ವರ್ಷದ ವಯಸ್ಸಿನ ವ್ಯಕ್ತಿಯೊಬ್ಬರು ಉಡುಪಿ ಜಿಲ್ಲಾ ಆಸ್ಪತ್ರೆಯ ವಿಶೇಷ ವಾರ್ಡ್ ಗೆ ದಾಖಲಾಗಿದ್ದಾರೆ. ಜಪಾನ ಹಡಗಿನಲ್ಲಿ ಇದ್ದರೂ ಅವರನ್ನು ಹಾಂಕಾಂಗ್ ನಲ್ಲಿ 14 ದಿನ ಪರೀಕ್ಷೆಗೆ ಒಳಪಡಿಸಿ ಬಿಡುಗಡೆಗೊಳಿಸಲಾಗಿತ್ತು. ಊರಿಗೆ ಬಂದ ಬಳಿಕ ಕೆಮ್ಮು, ಶೀತ ಜ್ವರ ಇಲ್ಲದಿದ್ದರೂ ಭೇದಿ ಮತ್ತು ಹೊಟ್ಟೆ ನೋವು ಸ್ವಲ್ಪ ಉಸಿರಾಟದ ಸಮಸ್ಯೆ ತಲೆದೋರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಶಿವಮೊಗ್ಗದಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.