ಮಂಗಳೂರು, ಮಾ14( Daijiworld News/MSP): ರಾಜ್ಯದಲ್ಲಿ ಕೊರೊನಾಘಾತಕ್ಕೆ ತತ್ತರಿಸುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ತೀವ್ರ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ವಿಮಾನ ನಿಲ್ದಾಣ, ಎನ್ಎಂಪಿಟಿ ಸೇರಿದಂತೆ ಹಲವೆಡೆ ಕೊರೊನಾ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ.
ಜಿಲ್ಲೆಯ ವೆನ್ಲಾಕ್ ಮತ್ತು ಲೇಡಿಗೋಶನ್ ಜಿಲ್ಲಾಸ್ಪತ್ರೆಗಳಲ್ಲಿ ತಪಾಸಣಾ ಕೇಂದ್ರಗಳಿದ್ದು , ಇದಲ್ಲದೆ ಜಿಲ್ಲೆಯ 6 ಸಮುದಾಯ ಆರೋಗ್ಯ ಕೇಂದ್ರ ಹಾಗೂ 66 ಪ್ರಾಥಮಿಕ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆಗಳಲ್ಲಿ ಕೊರೊನಾ ಸಂಬಂಧಿಸಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಅಲ್ಲಿನ ಸ್ಥಳೀಯ ವೈದ್ಯರ ಸಲಹೆಯ ಮೇರೆಗೆ ಜಿಲ್ಲಾಸ್ಪತ್ರೆಗಳಲ್ಲಿ ದಾಖಲಾಗಬಹುದಾಗಿದೆ.
ಇನ್ನು ಒಂದು ವಾರಗಳ ಕಾಲ ಯಾವುದೇ ಸಭೆ ಸಮಾರಂಭ ನಡೆಸುವಂತಿಲ್ಲ ಎಂಬ ಕರ್ನಾಟಕ ರಾಜ್ಯ ಆದೇಶದ ಪ್ರಕಾರ ಮಾ. 14ರಂದು ಬೆಳಗ್ಗೆ 10 ಗಂಟೆಗೆ ದ.ಕ. ಜಿಪಂ ಸಭಾಂಗಣದಲ್ಲಿ ನಡೆಯಬೇಕಿದ್ದ ವಿಶ್ವ ಗ್ರಾಹಕ ದಿನಾಚರಣೆ, ಪುರಭವನದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಬೇಕಿದ್ದ ರೈತರ, ಸಹಕಾರಿಗಳ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸಮ್ಮೇಳನ, ಮಾ. 15ರಂದು ನಡೆಯಬೇಕಿದ್ದ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ, ಹಂಪನಕಟ್ಟೆ ವಿ.ವಿ. ಕಾಲೇಜಿನಲ್ಲಿ ಮಾ. 16 ಮತ್ತು 17ಕ್ಕೆ ನಿಗದಿಯಾಗಿದ್ದ ಪ್ರತಿಭಾ ದಿನಾಚರಣೆ, ಮಾ. 14 ಮತ್ತು 15ರಂದು ಕದ್ರಿ ಪಾರ್ಕ್ ನಲ್ಲಿ ನಡೆಸಲು ಉದ್ದೇಶಿಸಿದ್ದ “ಸಾನಿಧ್ಯ ಉತ್ಸವ-2020′ ಕಾರ್ಯಕ್ರಮಗಳು ಮುಂದೂಡಿಕೆಯಾಗಿವೆ.