ಮಂಗಳೂರು, ಮಾ 14( Daijiworld News/MSP): ಕೋವಿಡ್ -19 ಸೋಂಕು ಕೇಳಿದರೆ ಭಾರತ ಮಾತ್ರವಲ್ಲ , ವಿಶ್ವವೇ ಬೆಚ್ಚಿ ಬೀಳುತ್ತಿದೆ. ವ್ಯಾಪಕವಾಗಿ ಹಬ್ಬುತ್ತಿರುವ ಕೋವಿಡ್ -19 ವೈರಸ್ ನ ವಿರುದ್ದ ದೇಶದ್ಯಂತ ಎಲ್ಲಾ ರಾಜ್ಯಗಳು ಸಮರ ಸಾರಿದ್ದು ಕೊರೊನಾ ಹರಡುವಿಕೆಯನ್ನು ತಡೆಗಟ್ಟಲೆಂದು ಕರ್ನಾಟಕ ಸೇರಿ ಬಹುತೇಕ ರಾಜ್ಯಗಳು ಲಾಕ್ ಡೌನ್ ಆಗಿದೆ.
ಈ ವೈರಸ್ ನ ಭೀತಿ ನಡುವೇ ಮಂಗಳೂರು ಬಂದರಿನಲ್ಲಿ ಕೊರೊನ್ ಕಾಣಿಸಿಕೊಂಡಿದೆ. ಆದರೆ ಇಲ್ಲಿ ಕಾಣಿಸಿಕೊಂಡಿರುವ ಕೊರೊನ್ ಕಂಡು ಮೀನುಗಾರರು ಭಯಪಡುವ ಬದಲಿ ಹಿರಿಹಿರಿ ಹಿಗ್ಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕೊರೊನ್ ನೋಡಲೆಂದೇ ಜನ ಸೇರತೊಡಗಿದ್ದಾರೆ. ಆದರೆ ಇಲ್ಲಿ ಕಾಣ ಸಿಕ್ಕ ಕೊರೊನ್, ’ವೈರಸ್’ಅಲ್ಲ, ಬದಲಾಗಿ ಕೊರೊನ್ ಮೀನು.
ಹೌದು, ಬಲು ಅಪರೂಪದ ಜಾತಿಗೆ ಸೇರಿದ ಭಾರೀ ಮೌಲ್ಯದ ಮೀನು ಇದಾಗಿದ್ದು, ಇದು ಮೀನುಗಾರರಿಗೆ ಲಾಭ ತಂದುಕೊಟ್ಟಿದೆ. ಪ್ರಸಕ್ತ ಮೀನುಗಾರಿಕಾ ಋತು ಮೀನುಗಾರರ ಪಾಲಿಗೆ ಆಶಾದಾಯಕವಾಗಿಲ್ಲ. ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆ ಒಂದೂವರೆ ತಿಂಗಳು ತಡವಾಗಿ ಆರಂಭವಾಗಿತ್ತು. ತಡವಾದರೂ ಬಲೆಗೆ ಭರಪೂರ ಮೀನುಗಳು ಸಿಗಬಹುದು ಎಂಬ ಕಡಲ ಮಕ್ಕಳ ನಿರೀಕ್ಷೆ ಹುಸಿಯಾಗಿತ್ತು . ಸಮುದ್ರದಲ್ಲಿ ಮೀನಿನ ಕ್ಷಾಮ ಎದುರಾಗಿದ್ದು, ಬರಸಿಡಿಲು ಬಡಿದಂತಾಗಿತ್ತು. ಈ ನಡುವೆ ಭಾರೀ ಮೌಲ್ಯದ ಮೀನು ಬಲೆಗೆ ಬಿದ್ದು ಕೊಂಚ ನಿಟ್ಟಿಸಿರು ಬಿಡುವಂತಾಗಿದೆ.
ಈ ಮೀನಿಗೆ ಕರಾವಳಿ ಭಾಗದಲ್ಲಿ ಬೇಡಿಕೆ ಕಡಿಮೆಯಾದರೂ, ಗುಜರಾತ್ ಸೇರಿ ಬೇರೆ ರಾಜ್ಯಗಳಿಗೆ ರಫ್ತಾಗುತ್ತದೆ. ಅಪರೂಪದ ಜಾತಿಗೆ ಸೇರಿದ ಕೊರೊನಾ ಮೀನು ಕೆ.ಜಿ.ಗೆ 1800 ರಿಂದ 2 ಸಾವಿರ ಮೌಲ್ಯವನ್ನು ಹೊಂದಿದೆ. ಇದರ ವೈಜ್ಞಾನಿಕ ಹೆಸರು ಮೀನುಗಾರರಿಗೆ ತಿಳಿದಿಲ್ಲವಾದರೂ ಕೊರೋನಾ ಭೀತಿ ಮಧ್ಯೆ ಬಂದರಿನಲ್ಲಿ ಕೊರೋನ್ ಮೀನಿನದ್ದೆ ಸುದ್ದಿ ಎನ್ನುವಂತಾಗಿದೆ.