ಮಂಗಳೂರು, ಮಾ 14( Daijiworld News/MSP): ಕೊರೊನಾ ಪರಿಣಾಮ ಒಲಿಂಪಿಕ್ಸ್ ಟಾರ್ಚ್ ರಿಲೆ ಒಂದೇ ದಿನದಲ್ಲಿ ಮೊಟಕುಗೊಂಡಿದೆ. ಮಾ.29 ರಿಂದ ಆರಂಭವಾಗಬೇಕಿದ್ದ ಐಪಿಎಲ್ ಪಂದ್ಯಾವಳಿಯನ್ನು ಮಾ. 15 ರವರೆಗೆ ಅಮಾನತಿನಲ್ಲಿರಿಸಲಾಗಿದೆ. ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಗೆ ಗುಂಪು ಸೇರದಂತೆ , ಜಾತ್ರೆ , ಸಮಾರಂಭ , ಮಾಲ್ , ಕ್ರೀಡಾಕೂಟಗಳಿಗೆ ನಿಷೇಧ ಹೇರಲಾಗಿದೆ.
ರಾಜ್ಯ ಸರ್ಕಾರದ ಆದೇಶವಿದ್ದರೂ ಬೇಜಾವಬ್ದಾರಿಯಂತೆ ವರ್ತಿಸುತ್ತಿರುವ ತುಳು ಚಿತ್ರರಂಗ, ನಗರದ ನೆಹರು ಮೈದಾನದಲ್ಲಿ ತುಳು ಚಲನಚಿತ್ರ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ವತಿಯಿಂದ ಕೋಸ್ಟಲ್ ವುಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಆಯೋಜಿಸಿದೆ.
ವಿಶೇಷ ಎಂದರೆ ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ಕಮಿಷನರ್ ಕಚೇರಿ ಎದುರಿಗೆ ಇರುವ ನೆಹರು ಮೈದಾನದಲ್ಲಿಯೇ ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ(ರಿ) ಇದರ ನಾಲ್ಕನೇ ವರ್ಷದ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ಅದ್ದೂರಿಯಾಗಿ ನಡೆಯುತ್ತಿದ್ದು,ಇದರಲ್ಲಿ ಕೋಸ್ಟಲ್ ವುಡ್ ನಟ, ನಟಿಯರು, ಟೆಕ್ನಿಶಿಯನ್ ಭಾಗಿಯಾಗಿದ್ದಾರೆ.
ಜವಬ್ದಾರಿಯುತ ಸ್ಥಾನದಲ್ಲಿರುವ ತುಳು ಚಿತ್ರರಂಗ ಸರ್ಕಾರದ ಆದೇಶ ಗಾಳಿ ತೂರಿ, ರಾಜಾರೋಷವಾಗಿ ಪಂದ್ಯ ನಡೆಸುತ್ತಿರುವುದು ಎಷ್ಟು ಸರಿ ? ಎಂದು ಸಾರ್ವಜನಿಕರು ಪ್ರಶ್ನಿಸಿತೊಡಗಿದ್ದಾರೆ. ಸರ್ಕಾರದ ಆದೇಶದಂತೆ ಮದುವೆ, ನಾಮಕರಣದಂತಹ ಕಾರ್ಯಕ್ರಮಗಳೇ ರದ್ದುಗೊಳಿಸುತ್ತಿದ್ದರೂ ಕೋಸ್ಟಲ್ ವುಡ್ ಗೆ ಮಾತ್ರ ಆದೇಶ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸತೊಡಗಿದ್ದಾರೆ
ಕ್ರೀಡಾ ಚಟುವಟಿಕೆ ನಿಷೇಧಿಸಿದ್ದರೂ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾಟವನ್ನು ಕಂಡು ಕಾಣಿಸದಂತೆ ಜಿಲ್ಲಾಡಳಿತ, ಪಾಲಿಕೆ ಮತ್ತು ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆಯೇ ಎಂದು ಸಂಶಯಮೂಡತೊಡಗುತ್ತದೆ.