ಮಂಗಳೂರು, ಮಾ 14( Daijiworld News/MSP): ಕೊರೊನ ಕಾಯಿಲೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ನಿರ್ಬಂಧಗಳನ್ನು ಹೇರಿದ್ದು, ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ನಿರ್ದೇಶಿಸಿದ್ದಾರೆ.
ಮಾಲ್ ಗಳು, ಚಿತ್ರಮಂದಿರ, ನಾಟಕ, ರಂಗಮಂದಿರ, ಪಬ್, ನೈಟ್ ಕ್ಲಬ್ ಗಳು, ವಸ್ತುಪ್ರದರ್ಶನ, ಸಂಗೀತ ಕಾರ್ಯಕ್ರಮಗಳು, ಕ್ಲಬ್ ಗಳು, ಮ್ಯಾರಥಾನ್, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸುವ ಕ್ರೀಡಾಕೂಟಗಳು, ಹೆಚ್ಚು ಜನರು ಭಾಗವಹಿಸುವ ಮದುವೆಗಳನ್ನು ರಾಜ್ಯ ಸರಕಾರ ನಿರ್ಬಂಧಿಸಿದೆ.
ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವಂತೆ ಆಯೋಜಕರು ಗಮನಹರಿಸಬೇಕು. ಹೆಚ್ಚು ಜನರು ಇರುವ ಸ್ವಿಮಿಂಗ್ ಪೂಲ್ ಹಾಗೂ ಜಿಮ್ ಗಳನ್ನು ಮುಚ್ಚಬೇಕು. ಶಾಲಾ ಕಾಲೇಜು, ವಿಶ್ವವಿದ್ಯಾಲಯ, ಕೋಚಿಂಗ್ ಸೆಂಟರ್ ಗಳಿಗೆ ರಜೆ ಸಾರಲಾಗಿದ್ದು, ನಿಗದಿತ ಪರೀಕ್ಷೆಗಳನ್ನು ಮುಂಜಾಗ್ರತೆಯಲ್ಲಿ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಸರಕಾರದ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮೇಲುಸ್ತುವಾರಿ ನಡೆಸುವಂತೆ ಜಿಲ್ಲಾಧಿಕಾರಿಗಳು, ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಗಳಿಗೆ ನಿರ್ದೇಶಿಸಿದ್ದಾರೆ.