ಕಾಸರಗೋಡು,ಮಾ 14( Daijiworld News/MSP) : ರೈಲಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 1.40 ಕೋಟಿ ರೂ . ಹವಾಲ ಹಣವನ್ನು ಕಾಸರಗೋಡು ರೈಲ್ವೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ದೆಹಲಿ - ಎರ್ನಾಕುಲಂ ಮಂಗಳ ಎಕ್ಸ್ ಪ್ರೆಸ್ ರೈಲಿನಿಂದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಸಾಂಗ್ಲಿಯ ಅಂಕುಷ್ (38) , ಶಂಕರ್ (29) ಎಂಬಿಬ್ಬರನ್ನು ಬಂಧಿಸಲಾಗಿದೆ.
ಕುಂಬಳೆ ಗೆ ತಲುಪಿದಾಗ ರೈಲಿನಲ್ಲಿ ಸಿಬಂದಿಗಳು ತಪಾಸಣೆ ನಡೆಸುತ್ತಿದ್ದಾಗ ಸಂಶಯಯಾಸ್ಪದವಾಗಿ ಬ್ಯಾಗ್ ಗಳು ಕಂಡುಬಂದಿತ್ತು. ಇದರಿಂದ ಸಂಶಯಗೊಂಡ ಸಿಬಂದಿಗಳು ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು , ರೈಲು ಕಾಸರಗೋಡಿಗೆ ತಲುಪಿದಾಗ ತಪಾಸಣೆ ನಡೆಸಿದರು. ಇಬ್ಬರನ್ನು ವಿಚಾರಿಸಿದಾಗ ಅಸ್ಪಷ್ಟ ಉತ್ತರ ನೀಡಿದರು . ಬಳಿಕ ಬ್ಯಾಗ್ ಗಳನ್ನು ತೆರೆದು ತಪಾಸಣೆ ನಡೆಸಿದಾಗ ಕಾಗದಗಳಲ್ಲಿ ಸುತ್ತಿಟ್ಟಿದ್ದ ಸ್ಥಿತಿಯಲ್ಲಿ ನೋಟುಗಳು ಪತ್ತೆಯಾಗಿವೆ .
ಇವರು ಮುಂಬೈ ಯಿಂದ ಎರ್ನಾಕುಲಂ ಗೆ ಟಿಕೆಟ್ ಪಡೆದಿದ್ದರು. ಎರಡು ಸಾವಿರ ಮುಖಬೆಲೆಯ 40 ಲಕ್ಷ ರೂ , ಒಂದು ಕೋಟಿ ರೂ . ಗಳ 500 ರೂ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ . ಈ ಹಿಂದೆ ಬಸ್ಸು ಸೇರಿದಂತೆ ವಾಹನಗಳಲ್ಲಿ ಹಣ ಸಾಗಾಟ ಮಾಡುತ್ತಿದ್ದು , ಇದೀಗ ತಪಾಸಣೆ ತೀವ್ರಗೊಳಿಸಿ ರುವ ಹಿನ್ನಲೆಯಲ್ಲಿ ರೈಲು ಮೂಲಕ ಸಾಗಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ .
"ಮಹಾರಾಷ್ಟ್ರ ದ ರತ್ನಗಿರಿ ರೈಲು ನಿಲ್ದಾಣದಿಂದ ಓರ್ವ ಬ್ಯಾಗನ್ನು ನೀಡಿದ್ದು ಎರ್ನಾಕುಲಂ ಗೆ ತಲಪಿಸುವಂತೆ ಹೇಳಿದ್ದು ,50 ಸಾವಿರ ರೂ . ಕಮಿಷ ನ್ ನೀಡುವುದಾಗಿ ಭರವಸೆ ನೀಡಿದ್ದು , ಇದರಂತೆ ಎರ್ನಾಕುಲಂ ಗೆ ತೆರಳುತ್ತಿದ್ದೆವು . ಬ್ಯಾಗ್ ನಲ್ಲಿ ಏನಿದೆ ಎಂಬುದು ತಮಗೆ ಗೊತ್ತಿಲ್ಲ" ಎಂದು ಬಂಧಿತರು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಪಡಿಸಿದ್ದಾರೆ .
ಈ ಪೈಕಿ ಅಂಕುಶ್ ಈ ಹಿಂದೆಯೂ ಹಣ ಸಾಗಾಟ ಮಾಡಿದ್ದಾಗಿ ತನಿಖೆಯಿಂದ ಸ್ಪಷ್ಟ ಗೊಂಡಿದೆ . ಪ್ರಕರಣವನ್ನು ಎನ್ಫೋರ್ಸ್ ಮೆಂಟ್ ಗೆ ಹಸ್ತಾತರಿಸಲಾಗಿದ್ದು , ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ . ಕಾಸರಗೋಡು ರೈಲ್ವೆ ಠಾಣಾ ಸಬ್ ಇನ್ಸ್ ಪೆಕ್ಟರ್ ಟಿ . ಎನ್ ಮೋಹನನ್ , ಸುಧೀರ್ ಕುಮಾರ್ , ಬಾಲಕೃಷ್ಣನ್ , ಶಿವಕುಮಾರ್ ಕಾರ್ಯಾಚರಣೆಗೆ ನೇತೃತ್ವ ನೀಡಿದರು.