ಮಂಗಳೂರು, ಮಾ. 14 (Daijiworld News/MB): ಮಂಗಳೂರು ತಾಲೂಕು ಕೂಳೂರು ಬಳಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೂಳೂರು ಹಳೆ ಸೇತುವೆ ಶಿಥಿಲ ಅವಸ್ಥೆಯಲ್ಲಿರುವುದರಿಂದ ಮಾ.16 ರಿಂದ ಹಳೆ ಸೇತುವೆಯ ಹಾಗೂ ರಸ್ತೆಯ ರಿಪೇರಿ ಆಗುವವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಲು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶಿಸಿದ್ದಾರೆ.
ಈ ಕುರಿತಾಗಿ ಅಧಿಸೂಚನೆ ಹೊರಡಿಸಿರುವ ಜಿಲ್ಲಾಡಳಿತ, "ಮಂಗಳೂರು ತಾಲೂಕು ಕೂಳೂರು ಬಳಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೂಳೂರು ಹಳೆ ಸೇತುವೆ ಶಿಥಿಲ ಅವಸ್ಥೆಯಲ್ಲಿರುವುದರಿಂದ ಸೇತುವೆಯ ಹಾಗೂ ರಸ್ತೆಯ ರಿಪೇರಿ ಆಗಲಿದ್ದು ಅದು ಮುಗಿಯುವವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಬೇಕೆಂದು ಆದೇಶಿಸಿದೆ.
ಕೂಳೂರು ಹೊಸ ಸೇತುವೆಯಲ್ಲಿ ಈಗಿರುವ ಏಕಮುಖ ರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ಮಾರ್ಪಾಡು ಮಾಡಬೇಕು. ಈ ಹೊಸ ಸೇತುವೆಯಲ್ಲಿ ಉಡುಪಿಯಿಂದ ಮಂಗಳೂರಿಗೆ ಸಂಚಾರ ಮಾಡುವ ಲಘು ವಾಹನಗಳು ಹಾಗೂ ನಿತ್ಯ ಸಂಚಾರ ಮಾಡುವ ಪ್ರಯಾಣಿಕ ಬಸ್ಸುಗಳಿಗೆ ಮತ್ತು 6 ಚಕ್ರದ ಸಾಗಣಿಕಾ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಬೇಕು. ಹಾಗೆಯೇ ಎಲ್ಲಾ ವಿಧದ ಘನ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ಕಡೆಗೆ ಚಲಿಸುವ ಘನ ವಾಹನಗಳು ಪಡುಬಿದ್ರೆ ಕಾರ್ಕಳ ಮಾರ್ಗವಾಗಿ ಬೆಂಗಳೂರಿಗೆ ಹೋಗಬೇಕು. ಉಡುಪಿಯಿಂದ ಮಂಗಳೂರಿಗೆ ಚಲಿಸುವ ಎಲ್ಲಾ ಘನ ವಾಹನಗಳು ಮುಲ್ಕಿಯಿಂದ ಕಿನ್ನಗೋಳಿ- ಮೂಡಬಿದ್ರೆ ಮಾರ್ಗವಾಗಿ ಹಾಗೂ ಹಳೆಯಂಗಡಿ ಕಡೆಯಿಂದ ಕಿನ್ನಿಗೋಳಿ - ಮೂಡುಬಿದ್ರೆ ಮಾರ್ಗವಾಗಿ, ಸುರತ್ಕಲ್ ಕಡೆಯಿಂದ ಬಜಪೆ ಮಾರ್ಗವಾಗಿ ಸಂಚಾರ ಮಾಡಬೇಕು ಎಂದು ಆದೇಶಿಸಲಾಗಿದೆ.