ಉಡುಪಿ, ಮಾ. 14 (Daijiworld News/MB) : ಕೊರೊನಾ ವೈರಸ್ ಶಂಕೆಯಿಂದ ಮಣಿಪಾಲದ ಕೆಎಂಸಿ ಹಾಗೂ ಉಡುಪಿಯ ಜಿಲ್ಲಾಸ್ಪತ್ರೆಗಳಿಗೆ ದಾಖಲಾಗಿದ್ದ ಮೂವರಲ್ಲೂ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿರುವ ಅವರು, ಮೂವರು ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳನ್ನು ಶುಕ್ರವಾರ ಶಿವಮೊಗ್ಗದ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಇದರ ಪರೀಕ್ಷೆಯ ವರದಿ ಬಂದಿದ್ದು ಅವರಿಗೆ ಸೋಂಕು ತಗಲಿಲ್ಲ ಎಂದು ತಿಳಿದು ಬಂದಿದೆ ಎಂದು ಹೇಳಿದರು.
ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದುಬೈ ಮೂಲದ ಕೆಎಂಸಿ ವೈದ್ಯಕೀಯ ವಿದ್ಯಾರ್ಥಿ ಹಾಗೂ ಜಿಲ್ಲಾಸ್ಪತ್ರೆಗೆ ಶಿರ್ವದ ೩೭ ರ ಹರೆಯದ ಯುವಕ ಹಾಗೂ ಸಾಗರ ತಾಲೂಕು ಆನಂದಪುರದ ೬೮ ವರ್ಷದ ವೃದ್ಧೆಯನ್ನು ಕೊರೊನಾ ಸೋಂಕು ಶಂಕೆಯಲ್ಲಿ ದಾಖಲಿಸಲಾಗಿತ್ತು.
ವೃದ್ಧೆಯ ಮಾದರಿಯನ್ನು ಮೂರು ಬಾರಿ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮೂರು ಬಾರಿಯೂ ನೆಗೆಟಿವ್ ವರದಿ ಬಂದಿದೆ ಎಂದು ಡಾ. ಸೂಡ ತಿಳಿಸಿದ್ದಾರೆ.
ಈ ನಡುವೆ ಜರ್ಮನಿಯಿಂದ ಬಂದಿರುವ ಕಾಪು ಮೂಲದ ಯುವಕ ಶೀತ, ಕೆಮ್ಮು ಇದ್ದ ಹಿನ್ನಲೆಯಲ್ಲಿ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಖುದ್ದಾಗಿ ಬಂದಿದ್ದು ಆತನನ್ನು ಪ್ರತ್ಯೇಕ ವಾರ್ಡ್ಗೆ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.
ಯುವಕನ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.