ಉಡುಪಿ, ಫೆ 18 : ಮನೆಯ ಬಾಗಿಲ ಚಿಲಕ ಮುರಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತನ್ನು ಕಳವುಗೈದು ಪರಾರಿಯಾದ ಘಟನೆ ಉಡುಪಿಯ ವಿದ್ಯೋದಯ ಸ್ಕೂಲ್ ಬಳಿ ನಡೆದಿದೆ. ಫೆ 17 ರ ಶನಿವಾರ ಸೂರ್ಯ ಕುಮಾರ್ ಶೇಟ್ ಎಂಬವರ ಮನೆಗೆ ತಡರಾತ್ರಿ ನುಗ್ಗಿದ ಕಳ್ಳರು ಮನೆಯ ಮುಂಬಾಗಿಲಿನ ಚಿಲಕವನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಲಾಕರ್ ನ ಬೀಗ ತೆರದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತನ್ನು ದೋಚಿಕೊಂಡು ಹೋಗಿದ್ದಾರೆ. ಸೂರ್ಯ ಕುಮಾರ್ ಅವರು ಪ್ರಾಚಿನ ಕಾಲದ ಚಿನ್ನದ ನಾಣ್ಯಗಳ ಉದ್ದಿಮೆದಾರರಾಗಿದ್ದು ,ಪರಿಚಯದ ವ್ಯಕ್ತಿಗಳಿಂದ ಕಳ್ಳತನ ನಡೆದಿರಬಹುದು ಎಂದು ಪೋಲಿಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಕಳ್ಳರು ಲಾಕರ್ ನಲ್ಲಿದ್ದ ಸುಮಾರು 50 ಲಕ್ಷದಷ್ಟು ಬೆಲೆ ಬಾಳುವ ಚಿನ್ನದ ನಾಣ್ಯಗಳನ್ನು ಎಗರಿಸಿಕೊಂಡು ಹೋಗಿರಬಹುದೆಂದು ಅಂದಾಜಿಸಲಾಗಿದೆ. ಕಳೆದ 15 ದಿನಗಳಿಂದ ಸೂರ್ಯ ಕುಮಾರವರು ಅನಾರೋಗ್ಯದ ಕಾರಣದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂರ್ಯ ಕುಮಾರ್ ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲು ಅವರ ಮನೆಯವರು ರಾತ್ರಿ ಸಮಯ ಆಸ್ಪತ್ರೆಗೆ ತೆರಳುತ್ತಿದ್ದರು. ಸರಿಯಾದ ಸಮಯವನ್ನು ನೋಡಿ ಕಳ್ಳರು ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದಾರೆ. ಘಟನೆ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಬೇಟಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ ಪೋಲಿಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.